Advertisement

ಸೋಂಕು ಲಕ್ಷಣ ಗುಟ್ಟು ಮೃತ್ಯುವಿನೆದುರು ರಟ್ಟು

09:42 PM May 20, 2021 | Team Udayavani |

ವರದಿ : ರಾಘವೇಂದ್ರ ಬೆಟ್ಟಕೊಪ್ಪ  

Advertisement

ಶಿರಸಿ: ಸೋಂಕಿನ ಲಕ್ಷಣಗಳು ಇದ್ದರೂ ಯಾರಿಗೂ ಹೇಳದೇ ಮನೆ ಮದ್ದಿಗೆ ಮುಂದಾಗಿ ಕೊನೇ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರೇ ಸಾವಿಗೆ ಬಲಿಯಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಅಂಕಿ-ಅಂಶಗಳು ಇದನ್ನೇ ಪ್ರತಿಪಾದಿಸುತ್ತಿದ್ದು, ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ಎಂಟತ್ತು ದಿನಗಳ ಬಳಿಕ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದ ಬರುತ್ತಿರುವುದೇ ಸಾವಿನ ಪ್ರಮಾಣ ಅಧಿಕವಾಗಲು ಕಾರಣಾಗುತ್ತಿದೆ.

ವಿದ್ಯಾವಂತರೇ ತಪಾಸಣೆಗೆ ಒಳಗಾಗದೆ, ಆಸ್ಪತ್ರೆಗೆ, ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಕೊಳ್ಳದೆ ಇರುವುದು ಮರಣ ಅಥವಾ ಸೋಂಕಿನ ತೀವ್ರತೆ ಅನುಭವಿಸಲು ಕಾರಣವಾಗುತ್ತಿದೆ. ಎಷ್ಟೋ ಜನರು ಜ್ವರದ, ಥಂಡಿ ಔಷಧ ಪಡೆದು ತಾತ್ಕಾಲಿಕ ಉಪಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣದಿಂದ ಸೋಂಕಿತರು ಇನ್ನುಳಿದವರಿಗೂ ಸೋಂಕು ಹಂಚುವಂತೆ ಆಗಿದೆ. ತಾಲೂಕಿನಲ್ಲಿ ಕೊನೇ ಹಂತದಲ್ಲಿ ಚಿಕಿತ್ಸೆ ಪಡೆಯಲು ಬಂದವರು ಚಿಕಿತ್ಸೆ ಫಲಿಸದೇ ಮೃತರಾಗುತ್ತಿದ್ದಾರೆ.

ಯುವ ಜನರಿಗೂ ಉಸಿರಾಟದ ಸಮಸ್ಯೆ ಜೋರಾಗಿದೆ. ಜ್ವರ, ಥಂಡಿ, ಕೆಮ್ಮು, ಮೈ ಕೈ ನೋವು ಇದ್ದರೂ ಮನೆಯಲ್ಲೇ ಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಗೆ ಬಾರದೇ ಔಷಧ ಅಂಗಡಿಯಲ್ಲಿ ಪ್ಯಾರಾಸಿಟಮಲ್‌, ಡೋಲೋ 650 ಇತರ ಔಷಧ ಪಡೆಯುತ್ತಿದ್ದಾರೆ. ಗುಣವಾಗದೇ ಕೊನೇ ಘಳಿಗೆಯಲ್ಲಿ ಆಸ್ಪತ್ರೆಗೆ ಬರುವುದು ಸಮಸ್ಯೆಯ ಮೂಲ ಎನ್ನುತ್ತಾರೆ ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಕಣ್ಣಿ.

ಇದೊಂದು ಸಮಸ್ಯೆ: ಈ ಮಧ್ಯೆ ಸೋಂಕಿನ ತಪಾಸಣೆಗೆ ಕೊಟ್ಟ ಬಳಿಕ 48 ಗಂಟೆ ಒಳಗೆ ಕಾರವಾರಕ್ಕೆ ಹೋಗಿ ಪಾಸಿಟೀವೋ, ನೆಗಟೀವೋ ವರದಿ ಬರಬೇಕು. ಪಾಸಿಟೀವ್‌ ಬಂದ ಬಳಿಕ ಹೋಮ್‌ ಕ್ವಾರಂಟೈನ್‌ ಆಗಬೇಕು. ಆದರೆ, ವರದಿ ಬರುವ ಮೊದಲೇ ಅಲ್ಲಿ ಇಲ್ಲಿ ಓಡಾಟ ಮಾಡಿ ಸೋಂಕು ಹಂಚುವ ಕಾರ್ಯ ಆಗುತ್ತಿದೆ. ಇದಕ್ಕೆ ಸ್ವಯಂ ಜಾಗೃತಿ ಆಗಬೇಕು ಎನ್ನುತ್ತಾರೆ ಕೊರೊನಾ ವಾರಿಯರ್. ಈ ಮಧ್ಯೆ ಸೋಂಕಿತರು ಎಂದು ಗೊತ್ತಾಗಿ ಔಷಧ ಪಡೆಯುತ್ತಿದ್ದರೂ ಅಲ್ಲಿ ಇಲ್ಲಿ ಹಳ್ಳಿಗಳಲ್ಲಿ, ಪೇಟೆಗಳಲ್ಲಿ ಓಡಾಡುತ್ತಿರು ವವರೂ ಕಾಣುತ್ತಿದ್ದಾರೆ. ಇದರ ನಿಯಂತ್ರಣ ಸ್ಥಳೀಯ ಆಡಳಿತಕ್ಕೆ ತಲೆನೋವಾಗುತ್ತಿದೆ. ಕೋವಿಡ್‌ ಸೋಂಕಿನ ಲಕ್ಷಣ ಕಂಡು ಕೋವಿಡ್‌ ತಪಾಸಣೆ ಮಾಡಿಸಿಕೊಂಡರೆ ಫಲಿತಾಂಶ ಬರುವ ತನಕ ಸ್ವಯಂ ಕ್ವಾರಂಟೈನ್‌ ಆಗಬೇಕು, ಕ್ವಾರಂಟೈನ್‌ಗೆ ಹೆದರಿ ಚಿಕಿತ್ಸೆ ಪಡೆಯದೇ ಇರಬಾರದು. ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆ ಕೊಡುತ್ತಿದೆ.

Advertisement

ಸರಕಾರಿ ವ್ಯವಸ್ಥೆಯಲ್ಲಿ ಶಿರಸಿಯಲ್ಲೇ ಇನ್ನೂ 20 ಬೆಡ್‌ ಇದೆ. ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ಆಗದೇ ಇದ್ದವರಿಗೆ ಶಿರಸಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ಬನವಾಸಿ, ದಾಸನಕೊಪ್ಪದಲ್ಲೂ ಸೋಂಕಿತರ ವಾಸ್ತವ್ಯಕ್ಕೆ ತಾಲೂಕು ಆಡಳಿತ ಯೋಜಿಸಿದೆ. ಅನಾರೋಗ್ಯ, ಪಾಸಿಟೀವ್‌ ಎರಡನ್ನೂ ಗಪ್‌ಚುಪ್‌ ಮಾಡುವುದೇ ಕೊರೊನಾ ನಿಯಂತ್ರಣಕ್ಕೆ ಕಷ್ಟವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next