ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಕೊಂಚ ಇಳಿಕೆಯಾಗಿದ್ದು, ಸೋಮವಾರ 405 ಪ್ರಕರಣಗಳು ದಾಖಲಾದರೆ, ಸೋಂಕಿಗೆ 06 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ವೈದ್ಯರ ಮುಷ್ಕರದ ಬಳಿಕ ಪ್ರತಿನಿತ್ಯ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಸೋಮವಾರ ಸೋಂಕಿನ ಅಬ್ಬರ ತಗ್ಗುವುದರ ಜೊತೆಗೆ, ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಸೋಮವಾರ 405 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 17949ಕ್ಕೆ ಏರಿಕೆಯಾಗಿದೆ. ಜತೆಗೆ 368 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 12753ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 4752 ಸೋಂಕಿತರಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವಿನ ಸಂಖ್ಯೆ ಇಳಿಕೆ: ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಸೋಮವಾರ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಪ್ರತಿನಿತ್ಯ 10ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದರು. ಆದರೆ, ಸೋಮವಾರ 6 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 444ಕ್ಕೆ ಏರಿಕೆಯಾಗಿದೆ. 77 ಹಾಗೂ 72 ವರ್ಷ ಇಬ್ಬರು ಪುರುಷರು ಸೇರಿದಂತೆ 67, 65, 55 ಹಾಗೂ 50 ವರ್ಷ ನಾಲ್ವರು ಮಹಿಳೆಯರು ಜ್ವರ, ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಮೃತರ ಸೋಂಕಿನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಒಂದೇ ಕಾರ್ಖಾನೆ 70 ಮಂದಿಗೆ ಸೋಂಕು ಮೈಸೂರು: ನಗರದ ಜೆ.ಪಿ. ನಗರದಲ್ಲಿರುವ ಜಾಕಿ ಕಾರ್ಖಾನೆಯಲ್ಲಿನ 70 ಮಂದಿ ನೌಕರರಿಗೆ ಸೋಂಕು ಹರಡಿರುವುದರಿಂದ ಪಾಲಿಕೆ ಆರೋಗ್ಯಾಧಿಕಾರಿಗಳು ಕಾರ್ಖಾನೆಯನ್ನು ಬಂದ್ ಮಾಡಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕಾರ್ಖಾನೆಯ ನೌಕರರಲ್ಲಿ ಸೋಂಕು ಕಾಣಿಸಿಕೊಂಡಿದ್ದರು. ಅಲ್ಲಿನ ಆಡಳಿತ ಮಂಡಳಿ ಯಾವುದೇ ಮುನ್ನೆಚ್ಚರಿಕೆ ಹಾಗೂ ನೌಕರರಿಗೆ ರಜೆ ಘೋಷಿಸದೇ, ನಿರ್ಲಕ್ಷ್ಯ ವಹಿಸಿತ್ತು. ಜೊತೆಗೆ ತನ್ನ ನೌಕರರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಯಾವುದೇ ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಚಿಕಿತ್ಸೆ ನೀಡದೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನೌಕರರನ್ನು ದಾಖಲಿಸಲಾಗುತ್ತಿತ್ತು. ಈ ಹಿನ್ನೆಲೆ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ಡಾ.ನಾಗರಾಜು, ಡಾ. ಜಯಂತ್, ಪಾಲಿಕೆ ಆರೋಗ್ಯ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ತಂಡ ಕಾರ್ಖಾನೆಯನ್ನು ಬಂದ್ ಮಾಡಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಜಯಂತ್ ಪತ್ರಿಕೆಗೆ ತಿಳಿಸಿದ್ದಾರೆ.