ಮುಂಬಯಿ, ಜು. 25: ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮುಂಬಯಿಯಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದ ಬಳಿಕ ಮುಂಬಯಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.
ಜೂನ್3 ರಿಂದ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಆ ಸಂದರ್ಭ 43,262 ಸೋಂಕಿತರಿದ್ದು ಇದು ಜುಲೈ 22ಕ್ಕೆ 1,04,572ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಮುಂಬಯಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಾದ 49 ದಿನಗಳಲ್ಲಿ ಒಟ್ಟು 61,310 ಪ್ರಕರಣ ಕಂಡುಬಂದಿದೆ. ಈ ಸಂಖ್ಯೆ ಮುಂಬಯಿಯ ಒಟ್ಟು ಸೋಂಕಿತರ ಶೇ. 59ರಷ್ಟಿದೆ. ಆರ್ಥಿಕ ಚಟುವಟಿಕೆಗಳು ಪ್ರಾರಂಭವಾದ ಬಳಿಕ ಸೋಂಕು ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೈಗಾರಿಕಾ ಸಂಕೀರ್ಣ, ಮಾರುಕಟ್ಟೆ, ಅಂಗಡಿ, ವಿಮಾನ ನಿಲ್ದಾಣದ ಪ್ರಾರಂಭದೊಂದಿಗೆ ಜನರ ಸಂಚಾರ ಮತ್ತು ನಿರ್ಲಕ್ಷ್ಯ ಹರಚ್ಚಾಗಿದ್ದು ಹಲವರ ವಿರುದ್ಧ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಧಾರಾವಿ, ವರ್ಲಿ, ಬೈಕಲಾ, ಮಲಬಾರ್‌ಹಿಲ್‌ನಂತಹ ಪ್ರದೇಶ ಗಳಲ್ಲಿ ರೋಗಿಗಳ ಸಂಖ್ಯೆ ಪ್ರಸ್ತುತ ಗಣನೀಯವಾಗಿ ಕಡಿಮೆಯಾಗಿದೆ, ಆದರೆ ಉತ್ತರ ಮುಂಬಯಿ, ಪಶ್ಚಿಮ ಉಪನಗರ ಮತ್ತು ಪೂರ್ವ ಉಪನಗರಗಳಲ್ಲಿ ದೊಡ್ಡ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ತಿಂಗಳಲ್ಲಿ, ಕಟ್ಟಡಗಳು ಕೋವಿಡ್ ರೋಗಿಗಳಲ್ಲಿ ಶೇ. 108 ರಷ್ಟು ಹೆಚ್ಚಳ ಕಂಡಿದ್ದರೆ, ಕೊಳೆಗೇರಿ ಪ್ರದೇಶವು ಈ ಅವಧಿಯಲ್ಲಿ 60 ಪ್ರತಿಶತ ರೋಗಿಗಳನ್ನು ಪಡೆದಿದೆ.