ಮಹಾನಗರ: ದ.ಕ. ಜಿಲ್ಲೆಯಲ್ಲಿ ಕೋವಿಡ್ ತನ್ನ ಕಂಬಂಧಬಾಹು ವಿಸ್ತರಿಸುತ್ತಿದೆ. ಎರಡು ವಾರಗಳಿಂದ ಕೋವಿಡ್ ದೈನಂದಿನ ಪ್ರರಕಣದಲ್ಲಿ ಏರಿಕೆ ಕಾಣುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಸಾರ್ವಜನಿಕರು ಕೊರೊನಾ ಮಾರ್ಗಸೂಚಿ ಪಾಲನೆಯಲ್ಲಿ ಕೆಲವು ಮಂದಿ ನಿರ್ಲಕ್ಷ್ಯ ವಹಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಅಪಾಯಕ್ಕೆ ಕಾರಣವಾಗಬಹುದು.
ದ.ಕ. ಜಿಲ್ಲೆಯಲ್ಲಿ ಮಾರ್ಚ್‌ವರೆಗೆ ಶೇ.5.77ರಷ್ಟು ಕೋವಿಡ್ ಪಾಸಿಟಿವಿಟಿ ರೇಟಿಂಗ್ ಇತ್ತು. ಇದೀಗ ಕೊರೊನಾ ದೈನಂದಿನ ಪ್ರಕರಣ ಏರಿಕೆಯಾಗುತ್ತಿದ್ದು, ಈ ಸಂಖ್ಯೆ ಸುಮಾರು ಶೇ.10ರಷ್ಟು ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸದ್ಯ ಕೋವಿಡ್ ರೋಗ ತಪಾಸಣೆ ಕೂಡ ಹೆಚ್ಚುತ್ತಿದೆ. ಪ್ರತೀ ದಿನ 4 ರಿಂದ 5 ಸಾವಿರ ಮಂದಿಯನ್ನು ತಪಾಸಣೆ ನಡೆಸಲಾಗುತ್ತಿದ್ದು, ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ, ರೋಗ ಗುಣಲಕ್ಷಣ ಉಳ್ಳವರ ತಪಾಸಣೆ ನಡೆಸಲಾಗುತ್ತಿದೆ. ಇದರಲ್ಲಿಯೇ ದೊಡ್ಡ ಸಂಖ್ಯೆಯ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ.
ದ.ಕ. ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಕೊರೊನಾ ದೈನಂದಿನ ಪ್ರಕರಣಗಳು ಎರಡಂಕೆ ಸಂಖ್ಯೆಯಲ್ಲಿತ್ತು. ಎರಡು ವಾರದಿಂದ ಹಠಾತ್ತನೆ ಏರಿಕೆ ಕಂಡಿತ್ತು. ರೋಗ ಹರಡುವ ವೇಗ ಹೆಚ್ಚಾಗಿದೆ. ಮನೆಗಳಿಗೂ ಸೋಂಕು ಹರಡಿದ್ದು, ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯವಿದೆ. ಏಕೆಂದರೆ, ಜಿಲ್ಲಾಡಳಿತದ ಅಂಕಿ ಅಂಶದ ಪ್ರಕಾರ ಕಳೆದ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ 6,547 ಮಂದಿಗೆ ಕೊರೊನಾ ಸೋಂಕು ತಗು ಲಿದ್ದು, ಒಟ್ಟು 13 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಲೆಕ್ಕ ಸಿಗುವುದು ಕೆಲವು ಮಾತ್ರ ! :
ದ.ಕ. ಜಿಲ್ಲೆಯಲ್ಲಿ ಕೊರೊನಾ ಇದ್ದು, ಅನ್ಯ ಕಾಯಿಲೆಯಿಂದ ಬಳಲುತ್ತಿರುವ ಎಲ್ಲ ಸಾವುಗಳು ಕೊರೊನಾ ಸಾವು ಎಂದು ಪರಿಗಣಿಸಲಾಗುವುದಿಲ್ಲ. ಸಾವಿನ ನಿಖರತೆ ಪತ್ತೆ ಮಾಡಿದ ಬಳಿಕವೇ ಆ ಸಾವು ಕೊರೊನಾದ್ದೇ ಅಥವಾ ಬೇರೆ ಕಾರಣವೇ ಎಂದು ನಿರ್ಧರಿಸಲಾಗುತ್ತದೆ. ಸಾವಿನ ನಿಖರತೆ ತಿಳಿದುಕೊಳ್ಳಲು 13 ಮಂದಿ ವೈದ್ಯಾಧಿಕಾರಿಗಳ ತಂಡವನ್ನು ಹಿಂದಿನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು
ನೇಮಕ ಮಾಡಿದ್ದರು. ಕೊರೊನಾ ಸಾವಿನ ಕುರಿಂತೆ ಈ ತಂಡವು ಸಮಗ್ರ ಪರಿಶೀಲನೆ, ಅನಾರೋಗ್ಯ ವರದಿ ಆಧರಿಸಿ ವರದಿ ನೀಡುತ್ತದೆ. ಬಳಿಕ ಆ ಸಾವಿನ ಖಚಿತತೆ ತಿಳಿಯುತ್ತದೆ.
ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿದ್ದು, ಪ್ರತಿಯೊಬ್ಬರೂ ಜಾಗರೂಕರಾಗಬೇಕು. ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿ. ಕೋವಿಡ್ ಗುಣಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿದೆ.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ