Advertisement
ಸೋಮವಾರ 1,963 ಮಂದಿಗೆ ಸೋಂಕು ತಗಲಿದ್ದು, 2,686 ಮಂದಿ ಗುಣಮುಖರಾಗಿದ್ದಾರೆ. ಜತೆಗೆ 19 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು (978) ಹೊರತುಪಡಿಸಿದರೆ ರಾಜ್ಯ ಯಾವ ಜಿಲ್ಲೆಗಳಲ್ಲಿಯೂ ಹೊಸ ಕೊರೊನಾ ಪ್ರಕಣಗಳು ನೂರರ ಗಡಿ ದಾಟಿಲ್ಲ. ಐದು ಜಿಲ್ಲೆಗಳಲ್ಲಿ ಬೆರಳೆಣಿಕೆ ಮಂದಿಗೆ ಸೋಂಕು ತಗಲಿದ್ದು, 19 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿಲ್ಲ. ಈ ಹಿಂದೆ ಜುಲೈ 7ರಂದು ರಾಜ್ಯದ ಸೋಂಕು ಪ್ರಕರಣಗಳು 1,492 ವರದಿಯಾಗಿದ್ದವು. ಅನಂತರ ಏರಿಕೆ ಹಾದಿ ಹಿಡಿದಿತ್ತು. ಸೋಂಕಿತರ ಸಾವು ಕೂಡ ಜುಲೈ ಬಳಿಕ ಇದೇ ಮೊದಲ ಬಾರಿ 20ಕ್ಕಿಂತ ಕಡಿಮೆಯಾಗಿವೆ. ಕಳೆದ ವಾರಷ್ಟೇ ಪ್ರಕರಣಗಳು 3,000ದಿಂದ 2,000ಕ್ಕೆ ಇಳಿದಿತ್ತು.
ನಿತ್ಯ ಒಂದು ಲಕ್ಷ ನಡೆಯುತ್ತಿದ್ದ ಸೋಂಕು ಪರೀಕ್ಷೆಗಳು ಈಗ 84 ಸಾವಿರಕ್ಕೆ ಇಳಿಕೆಯಾಗಿವೆ. ಈ ರೀತಿ ಪರೀಕ್ಷೆಗಳು ಕಡಿಮೆಯಾಗಿರುವುದು ಹೊಸ ಪ್ರಕರಣಗಳು ಇಳಿಕೆಯಾಗಲು ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 8.48 ಲಕ್ಷಕ್ಕೆ ತಲುಪಿದ್ದು, ಈ ಪೈಕಿ 8.04 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದ ಗುಣಮುಖ ದರ ಶೇ. 94.7ಕ್ಕೆ ಏರಿದೆ.