Advertisement

ಕೋವಿಡ್ ತಡೆಗೆ ಇಲಾಖೆಗಳಲ್ಲಿಲ್ಲ ಹೊಂದಾಣಿಕೆ

09:02 PM May 06, 2021 | Team Udayavani |

ಹೊನ್ನಾವರ: ಕೋವಿಡ್‌ ನಿವಾರಣೆಗೆ ಕಂದಾಯ ಇಲಾಖೆ ನೇತೃತ್ವದಲ್ಲಿ ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ಈ ಮೂರು ಇಲಾಖೆಯಲ್ಲಿ ಕೆಲಸ ಮಾಡುವವರು ಬೇರೆಬೇರೆ ವಿಷಯದಲ್ಲಿ ತರಬೇತಿ ಪಡೆದವರು, ಪರಿಣಿತರು ಆಗಿರುತ್ತಾರೆ. ಈ ಮೂರು ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವುದು ಕಷ್ಟದಾಯಕ.

Advertisement

ಈಗಾಗಲೇ ಮುಖ್ಯಮಂತ್ರಿಗಳು ಕೋವಿಡ್‌ ಜವಾಬ್ದಾರಿಯನ್ನು ನಾಲ್ವರು ಮಂತ್ರಿಗಳಿಗೆ ಹಂಚಿದ್ದಾರೆ. ಇಲಾಖೆಗಳ ಹೊಂದಾಣಿಕೆ ಇಲ್ಲದ ಕಾರಣ ಚಾಮರಾಜನಗರದಂತಹ ದುರ್ಘ‌ಟನೆಗಳು ಜಿಲ್ಲೆಯಲ್ಲಿ ನಡೆಯದಿರಲು ಇಲಾಖೆಗಳ ನಡುವೆ ಹೊಂದಾಣಿಕೆ ಸಾಧಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್‌ ನಿರ್ವಹಣೆ ಹೊಣೆ ಹೊತ್ತಿರುವುದರಿಂದ ಈ ಮಾತು ಹೇಳಲೇಬೇಕಾಗಿದೆ. ಆರೋಗ್ಯ ಇಲಾಖೆಯಲ್ಲಿಯೇ ಟಿಎಚ್‌ಒ, ಅವರ ಜೊತೆ ಕೆಲಸ ಮಾಡುವವರು, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ, ಅವರ ಜೊತೆ ಕೆಲಸಮಾಡುವವರಲ್ಲಿ ಹೊಂದಾಣಿಕೆ ಇರುವುದಿಲ್ಲ. ಇದನ್ನು ಅವರು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಪರಸ್ಪರ ಮೇಲಾಟ ನಡೆದಿರುವುದು ಜನಸಾಮಾನ್ಯರ ಅರಿವಿಗೆ ಬಂದಿದೆ. ಇದನ್ನು ಪ್ರಶ್ನಿಸಿದರೆ ಒಟ್ಟಾಗಿ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ ಅಷ್ಟೇ.

ಈಗಿರುವುದು ಜನರ ಜೀವನ್ಮರಣದ ಪ್ರಶ್ನೆ. ದೆಹಲಿ, ಬೆಂಗಳೂರಿನಲ್ಲಿ ನೀಡಿದ ಮಾರ್ಗದರ್ಶಕ ಸೂಚನೆಗಳನ್ನು ಸ್ಥಳೀಯವಾಗಿ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರುತ್ತದೆ. ರಾಜ್ಯದಲ್ಲಿ ಕೆಲವರು ಹೊಣೆಗೇಡಿಗಳು ಕರ್ತವ್ಯ ನಿರ್ವಹಣೆಯಲ್ಲಿ ತಪ್ಪಿದ ಕಾರಣ ಜನ ಶಿಕ್ಷೆ ಅನುಭವಿಸಿದರು. ಆದೇಶಗಳ ಮೇಲೆ ಆದೇಶ, ಅವುಗಳಿಗೆ ತಿದ್ದುಪಡಿ, ಆರೋಗ್ಯ ಇಲಾಖೆ ಕಾರ್ಯ ನಿರ್ವಹಣೆ ವರದಿ ಮಾಡಲು ಕೃಷಿ, ಅರಣ್ಯ ಅಧಿಕಾರಿಗಳ ನೇಮಕ ನಡೆದಿದೆ. ಇಂತಹ ಹಸ್ತಕ್ಷೇಪಗಳಿಂದ ಆಗಬೇಕಾದ ಕಾರ್ಯ ಆಗುವುದಿಲ್ಲ. ಜನ ಸ್ವಯಂ ಸ್ಫೂ ರ್ತಿಯಿಂದ ಬಂದು ಲಸಿಕೆ ಪಡೆದರೆ ಸರಿ, ಇಲ್ಲವಾದರೆ ಅವರ ಮನವೊಲಿಸಿ ಅವರನ್ನು ಕರೆತರುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಬಹುದು. ಹೊರಗಿನಿಂದ ಬಂದು, ಕೋವಿಡ್‌ ಸೂಚನೆಗಳನ್ನು ನಿರ್ಲಕ್ಷಿಸುವವರನ್ನು ಕಂದಾಯ ಇಲಾಖೆ ಗುರುತಿಸಬಹುದು. ಇಂಥವರ ಮೇಲೆ ದಂಡಹಾಕುವ ಕೆಲಸವನ್ನು ಪೊಲೀಸರು ಮಾಡಬೇಕಾಗುತ್ತದೆ. ಇನ್ನು ಸೋಂಕು ತಗಲಿಸಿಕೊಂಡು ಬರುವವರಿಗೆ ಯಾವ ಪ್ರಮಾಣದಲ್ಲಿ ಸೋಂಕಿದೆ, ಅವರು ಮನೆಯಲ್ಲಿ ಚಿಕಿತ್ಸೆ ಪಡೆಯಬೇಕೋ, ಕೋವಿಡ್‌ ಕೇರ್‌ ಸೆಂಟರಿನಲ್ಲಿಯೋ ಅಥವಾ ಆಕ್ಸಿಜನ್‌ ಉಳ್ಳ ಆಸ್ಪತ್ರೆಯಲ್ಲೋ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗುತ್ತದೆ.

ಮನೆಯಲ್ಲಿ ಕ್ವಾರಂಟೈನ್‌ ಕಳುಹಿಸಿ, ಕೋವಿಡ್‌ ಕೇರ್‌ ಸೆಂಟರ್‌ ಸೇರಬೇಕಾದವರನ್ನು ಅಲ್ಲಿಗೆ ಕಳುಹಿಸಿ, ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಬೇಕಾದವರನ್ನು, ಜಿಲ್ಲಾಸ್ಪತ್ರೆಗೆ ಹೋಗಬೇಕಾದವರನ್ನು ಗುರುತಿಸುವ ಅಧಿಕಾರ ಮೆಡಿಸಿನ್‌ ವಿಭಾಗದ ವೈದ್ಯರಿಗೆ ನೀಡಬೇಕು. ಇದು ಅವರ ಜವಾಬ್ದಾರಿ. ಇನ್ನು ಆಸ್ಪತ್ರೆಗಳಲ್ಲಿ ಹಗಲು, ರಾತ್ರಿ ಪಾಳಿಗೆ ಎಷ್ಟು ನರ್ಸ್‌ಗಳು, ಸಹಾಯಕರು, ವೈದ್ಯರು ಬೇಕೆಂಬುದನ್ನು ನಿರ್ಧರಿಸಿ, ಅವರು ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿ ಕಾರಿ ನಿರ್ವಹಿಸಬೇಕು.

ಕಂದಾಯ ಇಲಾಖೆ ಆಕ್ಸಿಜನ್‌, ಕೋವಿಡ್‌ ಕೇರ್‌ ಸೆಂಟರ್‌ ಸಿದ್ಧತೆ, ಕೋವಿಡ್‌ ಪೀಡಿತರಿಗೆ ಊಟೋಪಚಾರ ಇವುಗಳನ್ನು ವ್ಯವಸ್ಥೆ ಮಾಡಬೇಕು. ಅಗತ್ಯಬಿದ್ದರೆ ಬೇರೆ ಇಲಾಖೆಗಳನ್ನು ಇದಕ್ಕೆ ಬಳಸಿಕೊಳ್ಳಬಹುದು. ಜೊತೆಯಲ್ಲಿ ಸ್ವಯಂಸೇವಾ ಸಂಘಟನೆಗಳ ನೆರವನ್ನೂ ಪಡೆಯಬಹುದು. ತಾಲೂಕು ವೈದ್ಯಾಧಿಕಾರಿಗಳು ತಾಲೂಕಿನ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆದು ಅವರಿಗೆ ಬೇಕಾದ ಔಷಧ ಒದಗಿಸಿಕೊಟ್ಟು ಲಸಿಕೆ ನೀಡಿಕೆಯನ್ನು ಕ್ರಮಬದ್ಧಗೊಳಿಸುವ ಕೆಲಸ ಮಾಡುವುದಲ್ಲದೇ ಮೀಟಿಂಗ್‌ಗಳಿಗೆ ಹಾಜರಾಗುವುದು, ಸಕಾಲದಲ್ಲಿ ವರದಿ ಕಳಿಸುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಪೊಲೀಸ್‌ ಇಲಾಖೆ ಆಸ್ಪತ್ರೆಗಳಿಗೆ, ಲಸಿಕಾ ಕೆಂದ್ರಕ್ಕೆ ಬೇಕಾದ ಸಿಬ್ಬಂದಿ ನಿಯೋಜನೆ, ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು, ಸಂಚಾರ ನಿರ್ಬಂಧ, ಅಂಗಡಿ ಮುಚ್ಚುವಿಕೆ ಮೊದಲಾದವನ್ನು ನಿರ್ವಹಿಸಬೇಕು. ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್ ಗಳನ್ನು ಆಡಳಿತ ವೈದ್ಯರು, ಇತರ ಆಂಬ್ಯುಲೆನ್ಸ್‌ಗಳನ್ನು ತಾಲೂಕು ವೈದ್ಯಾಧಿಕಾರಿಗಳು ನಿರ್ವಹಿಸಬೇಕು. ಹೀಗೆ ಕೆಲಸ ಹಂಚಿಕೆ ಮಾಡಿಕೊಟ್ಟರೆ ಎಲ್ಲೇ ತೊಂದರೆ ಉಂಟಾದರೂ, ತಪ್ಪಾದರೂ ಸಂಬಂಧಿಸಿದವರನ್ನೇ ಜವಾಬ್ದಾರರನ್ನಾಗಿ ಮಾಡಿದರೆ ಜನಕ್ಕೆ ತೊಂದರೆ ಆಗುವುದಿಲ್ಲ, ಯಾರ ಗೌರವಕ್ಕೂ ತೊಂದರೆಯಿಲ್ಲ. ಈಗ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸಹಾಯವಾಣಿ ಇದೆ, ಅಲ್ಲಿಗೆ ದೂರು ನೀಡಿ ಅವರಿಂದ ಸಂಬಂಧಿಸಿದ ಇಲಾಖೆಗೆ ಹೋದರೆ ಚೆನ್ನಾಗಿರುತ್ತದೆ. ಇಷ್ಟೊಂದು ಇಲಾಖೆಗಳಿದ್ದರೂ ಸುರಳಿತವಾಗಿ ಯಾವ ಕೆಲಸವೂ ನಡೆದಂತೆ ಕಾಣುವುದಿಲ್ಲ. ಎಲ್ಲದಕ್ಕೂ ಒತ್ತಡ, ವಶೀಲಿ, ರಾಜಕೀಯ ಪ್ರಭಾವ ಬಳಸುವುದನ್ನು ಕಾಣುತ್ತೇವೆ. ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಒಳ್ಳೆಯವರಿದ್ದಾರೆ. ಹೊಂದಾಣಿಕೆ ಮನೋಭಾವದವರೂ ಇದ್ದಾರೆ. ಆದರೆ ಕೆಲವರಿಂದಾಗಿ ನಿರೀಕ್ಷಿಸಿದ ಮಟ್ಟದಲ್ಲಿ ಫಲಿತಾಂಶ ದೊರೆಯುತ್ತಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ವಿಭಾಗಗಳಿಗೆ ಜವಾಬಾœರಿ ನಿಗದಿಗೊಳಿಸಿದರೆ ಕೋವಿಡ್‌ ಗಂಭೀರ ಸ್ವರೂಪ ಪಡೆಯಲಿಕ್ಕಿಲ್ಲ ಎಂಬುದು ಬಹುಜನರ ಅಭಿಪ್ರಾಯ.

Advertisement

ವರದಿ :ಜೀಯು, ಹೊನ್ನಾವರ

 

Advertisement

Udayavani is now on Telegram. Click here to join our channel and stay updated with the latest news.

Next