ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 10040ಕ್ಕೆ ಏರಿದ್ದು, ಸಾವಿನ ಸಂಖ್ಯೆ 219ಕ್ಕೆ ಏರಿಕೆಯಾಗಿದೆ. ನಾಲ್ಕು ತಿಂಗಳೊಳಗೇ ಸೋಂಕಿತರ ಸಂಖ್ಯೆ ದಶ ಸಾವಿರ ದಾಟಿದೆ.
ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಬಂದ ಐವರಿಗೆ ಮೇ.12 ರಂದು ಮೊದಲ ಬಾರಿಗೆ ಕೋವಿಡ್ ಸೋಂಕು ದೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಸಿಟಿವ್ ವರದಿಗಳು ಪ್ರಕಟವಾಗಲು ಆರಂಭಿಸಿದವು. ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 325 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಅರಸೀಕೆರೆ ತಾಲೂಕಿನ 60 ವರ್ಷದ ವೃದ್ಧೆ ಹಾಗೂ ಮಂಡ್ಯ ಜಿಲ್ಲೆಗೆ ಸೇರಿದ 60 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
325 ಮಂದಿಗೆ ಪಾಸಿಟಿವ್: ಭಾನುವಾರ ಹೊಸದಾಗಿ ಸೋಂಕು ದೃಢಪಟ್ಟ 325 ಮಂದಿಯ ಪೈಕಿ 131 ಹಾಸನ ಮಂದಿ ತಾಲೂಕಿಗೆ ಸೇರಿದ್ದು, 43 ಮಂದಿ ಅರಸೀಕೆರೆ ತಾಲೂಕಿಗೆ ಸೇರಿದ್ದಾರೆ. ಬೇಲೂರು ತಾಲೂಕಿಗೆ ಸೇರಿದ 36 ಮಂದಿ, ಆಲೂರು ತಾಲೂಕಿಗೆ ಸೇರಿದ 30 ಮಂದಿ, ಸಕಲೇಶಪುರ ತಾಲೂಕಿಗೆಸೇರಿದ 27 ಮಂದಿ, ಅರಕಲಗೂಡು ಮತ್ತು ಚನ್ನರಾಯಪಟ್ಟಣ ತಾಲೂಕಿಗೆ ಸೇರಿದ ತಲಾ 19 ಮಂದಿ, ಹೊಳೆನರಸೀಪುರ ತಾಲೂಕಿಗೆ ಸೇರಿದ 17 ಮಂದಿ ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
3242 ಮಂದಿಗೆ ಚಿಕಿತ್ಸೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 316 ಮಂದಿ ಭಾನುವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಒಟ್ಟು 6579 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರೂ ಸೇರಿದಂತೆ ಒಟ್ಟು 3242 ಮಂದಿಗೆ ಚಿಕಿತ್ಸೆಮುಂದುವರಿದಿದೆ ಎಂದು ಹೇಳಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಿ: ಸೆಪ್ಟೆಂಬರ್ ನಲ್ಲಿಯೂ ಸೋಂಕು ಅತಿ ಹೆಚ್ಚಾಗುವ ಸೂಚನೆಯಿದೆ. ಹಾಗಾಗಿ ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದು.ಅನಿವಾರ್ಯವಾಗಿ ಹೊರ ಬಂದರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೋಂಕಿನಿಂದ ದೂರಾಗಬಹುದು. ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಬೇಕು. ಪಾಲ್ಗೊಂಡರೂ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಎಂದು ಮನವಿ ಮಾಡಿದ್ದಾರೆ.