ಗದಗ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 195 ಜನರಿಗೆ ಕೋವಿಡ್ ಸೋಂಕು ಕಂಡುಬಂದಿದೆ. ಜೊತೆಗೆ 199 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 6303ಕ್ಕೆ ಏರಿಕೆಯಾಗಿದ್ದು, 4523 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನುಳಿದಂತೆ 1688 ಪ್ರಕರಣಗಳು ಸಕ್ರಿಯವಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಗದಗ-101, ಮುಂಡರಗಿ-27, ನರಗುಂದ-16, ರೋಣ-28, ಶಿರಹಟ್ಟಿ-10 ಹಾಗೂ ಹೊರ ಜಿಲ್ಲೆಯ 13 ಜನರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
92 ಜನರು ಕೋವಿಡ್‌ಗೆ ಬಲಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮತ್ತೆ ನಾಲ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಈ ವರೆಗೆ 92 ಜನರು ಕೋವಿಡ್ ಗೆ ಬಲಿಯಾದಂತಾಗಿದೆ. ಗದಗ ನಗರದ ಪುಟ್ಟರಾಜನಗರ ನಿವಾಸಿ 62 ವರ್ಷದ ವೃದ್ಧ(ಪಿ-315299)ನಿಗೆ ಆ.26 ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಹೃದಯ ಸಂಬಂಧಿತ ಕಾಯಿಲೆ, ನಿಮೋನಿಯಾಯಿಂದಾಗಿ ಸೆ.1 ರಂದು ಮೃತಪಟ್ಟಿದ್ದಾರೆ. ನರಗುಂದ ತಾಲೂಕಿನ ಜಗಾಪುರ ಗ್ರಾಮದ ನಿವಾಸಿ 72 ವರ್ಷದ ವೃದ್ಧ(ಪಿ-374865)ನಿಗೆ ಸೆ. 2ರಂದು ಕೋವಿಡ್ ಸೋಂಕು ಖಚಿತವಾಗಿದ್ದು, ಹೃದಯ ಸಂಬಂಧಿ ಕಾಯಿಲೆ, ನಿಮೋನಿಯಾ, ಮಧುಮೇಹದಿಂದ ಸೆ. 2ರಂದು ಕೊನೆಯುಸಿರೆಳೆದರು.
ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ 62 ವರ್ಷದ ವೃದ್ಧ(ಪಿ-361429)ನಿಗೆ ಸೆ.1 ರಂದು ಸೋಂಕು ಪತ್ತೆಯಾಗಿದ್ದು, ನಿಮೋನಿಯಾ, ಶ್ವಾಸಕೋಶ ತೊಂದರೆಯಿಂದಾಗಿ ಸೆ. 2ರಂದು ಸಾವನ್ನಪ್ಪಿದ್ದಾರೆ. ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ನಿವಾಸಿ 24 ವರ್ಷದ ವ್ಯಕ್ತಿ(ಪಿ-347664)ಗೆ ಆ.30 ರಂದು ಸೋಂಕು ಕಂಡು ಬಂದಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆ. 30ರಂದು ಕೋವಿಡ್-19 ಅಲ್ಲದ ಅನ್ಯ ಕಾರಣದಿಂದ ನಿಧನರಾದರು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.