ಬೆಂಗಳೂರು: ನಗರದಲ್ಲೀಗ ಕೋವಿಡ್ ಸೋಂಕಿತರ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಹೊಸದಾಗಿ 3,495 ಪ್ರಕರಣ ದೃಢಪಟ್ಟಿದ್ದು ಸೋಂಕಿತರ ಒಟ್ಟಾರೆ ಸಂಖ್ಯೆ 87,680ಕ್ಕೆ ಏರಿದೆ. ಹಾಗೆಯೇ 2,034 ಮಂದಿ ವಿವಿಧ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಗುಣಮುಖರಾಗಿ ಮನೆ ಸೇರಿದ್ದು, ಒಟ್ಟಾರೆ ಚೇತರಿಸಿಕೊಂಡು ಬಿಡುಗಡೆಯಾದವರ ಪ್ರಮಾಣ 51,426 ಕ್ಕೆ ಏರಿಕೆಯಾಗಿದೆ.
ನಿನ್ನೆ ಹೊಸದಾಗಿ 35 ಮಂದಿ ಕೋವಿಡ್ ಗೆ ಬಲಿಯಾಗಿದ್ದು ಸಾವಿಗೀಡಾದವರ ಸಂಖ್ಯೆ ಈಗ 1,395ಕ್ಕೆ ಏರಿದೆ. ಕಳೆದ ಹಲವು ದಿನಗಳಿಂದ ಸೋಂಕಿತ ಪ್ರಕರಣ ಹೆಚ್ಚಳವಾಗುವುದರ ಜತೆಗೆ ಸಾವಿನ ಸಂಖ್ಯೆಯೂ ಏರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
10 ದಿನಗಳಲ್ಲಿ 22,809 ಸೋಂಕಿತ ಪ್ರಕರಣ: ಕಳೆದ 10 ದಿನಗಳಲ್ಲಿ ನಗರದಲ್ಲಿ 22,809 ಕೋವಿಡ್ ಸೋಂಕಿತ ಪ್ರಕರಣ ಕಂಡುಬಂದಿವೆ. ಆ.10 ರಂದು 1,610 ಪ್ರಕರಣ ದಾಖಲಾಗಿ ಇಳಿಗತಿ ಕಂಡಿತ್ತು. ಆದರೆ, ಆ.11 ರಿಂದೀಚೆಗೆ 2 ಸಾವಿದರ ಮೇಲೆ ಇದ್ದ ಸೋಂಕಿತರ ಸಂಖ್ಯೆ ಇದೀಗ 3,495ಕ್ಕೆ ದಾಪುಗಾಲಿಟ್ಟಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 10 ದಿನಗಳ ಅಂಕಿಅಂಶ ಗಮನಿಸಿದರೆ ನಿನ್ನೆಯ ಸಂಖ್ಯೆ 10 ದಿನಗಳಲ್ಲಿ ದಾಖಲಾದ ಅತಿ ಹೆಚ್ಚಿನ ಸೋಂಕಿತರ ಸಂಖ್ಯೆ ಎನಿಸಿದೆ. ಸೋಂಕಿತರಲ್ಲಿ 53,733 ಪುರುಷರುಮತ್ತು 33,925 ಮಹಿಳೆಯರು ಸೇರಿದ್ದಾರೆ. ಜತೆಗೆ ಗುಣಮುಖರಾಗುವ ಸಂಖ್ಯೆ 2 ಸಾವಿರದ ಮೇಲೆಯೇ ಇದ್ದು ಈವರೆಗೂ ಪುರುಷರು, ಮಹಿಳೆಯರು ಸೇರಿ 51,426 ಜನ ಮನೆ ಸೇರಿದ್ದಾರೆ. ಇದರಲ್ಲಿ 31,061 ಪುರುಷರು, 20,358 ಮಹಿಳೆಯರಿದ್ದಾರೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವ ಪ್ರಮಾಣ 58,65 ರಷ್ಟಿದೆ.
ಹಾಗೆಯೇ ನಗರದಲ್ಲಿ ಒಟ್ಟಾರೆ 34,858 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲರೂ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,400 ರತ್ತ ಮರಣದ ಸಂಖ್ಯೆ: ನಗರದಲ್ಲೀಗ ಕೋವಿಡ್ ಸೋಂಕಿಗೆ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ನಿನ್ನೆ 35 ಮಂದಿ ಸಾವಿಗೀಡಾಗಿದ್ದು ಇದರಲ್ಲಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಅಸುನೀಗಿದ 37ವರ್ಷದ ಯುವಕ ಮತ್ತು ತೀವ್ರ ಜ್ವರ, ಕಫ ಹಾಗೂ ಉಸಿರಾಟದ ತೊಂದರೆಯಿಂದ ಮರಣವನ್ನಪಿದ 85 ವರ್ಷದ ವೃದ್ಧ ಸೇರಿದ್ದಾರೆ.
ಒಟ್ಟಾರೆ ಕೋವಿಡ್ ದಿಂದ ಸಾವಿಗೀಡಾದವರ ಸಂಖ್ಯೆ ಈಗ 1,395ಕ್ಕೆ ಹೆಚ್ಚಿದೆ. ಇದರಲ್ಲಿ 468 ಮಹಿಳೆಯರು, 928 ಪುರುಷರು ಇದ್ದಾರೆ. ಜತೆಗೆ ಮರಣದ ಪ್ರಮಾಣ ಶೇ.1.59ರಷ್ಟಿದ್ದು 325 ಜನರು ವಿವಿಧ ಆಸ್ಪತ್ರೆಗಳ ತೀವ್ರ ನಿಗಾಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
5,05,416 ಮಂದಿಗೆ ಪರೀಕ್ಷೆ: ನಗರದಲ್ಲೀಗ ಒಟ್ಟು ಪಾಸಿಟಿವ್ ಪ್ರಮಾಣ ಶೇ.17.35 ಇದ್ದು, ಆಕ್ಟೀವ್ ರೇಟ್ ಶೇ.40 ರಷ್ಟಿದೆ. ಅಲ್ಲದೇ, ನಿನ್ನೆ 18,471 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದುವರಗೂ 5,05,416 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಹಾಗೆಯೇ ಒಟ್ಟು 34,077 ಕಂಟೈನ್ಮೆಂಟ್ ವಲಯವಿದ್ದು ಇದರಲ್ಲಿ 14,518 ಸಕ್ರಿಯ ಕಂಟೈನ್ಮೆಂಟ್ ವಲಯಗಳಿವೆ.
ನೀರಿನ ಅಭಾವದ ವಿಡಿಯೋ ಹರಿಬಿಟ್ಟ ಸೋಂಕಿತರು : ನಗರದ ಹೊರವಲಯದ ನೆಲಮಂಗಲ ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿನ ಕೋವಿಡ್ ಕೇಂದ್ರದಲ್ಲಿ ಇದೀಗ ಶುದ್ಧ ನೀರಿಗೂ ತೊಂದರೆ ಎದುರಾಗಿದೆ. ಕಂಟೇನರ್ ಕ್ಯಾನ್‌ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆ ಬಗ್ಗೆ ಕೋವಿಡ್ ಸೋಂಕಿತರು ವಿಡಿಯೋ ಮಾಡಿ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅಲ್ಲದೇ, ಶುದ್ಧ ನೀರಿನ ಬದಲು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ.