ಮುಂಬಯಿ, ಸೆ. 4: ಕೊಳಗೇರಿ ಧಾರಾವಿಯ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗುರುವಾರ 2,800ಕ್ಕೆ ಏರಿಕೆಯಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಧಾರಾವಿಯ 2,432 ಸೋಂಕಿತರು ಈಗಾಗಲೇ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನನಿಬಿಡ ಕೊಳೆಗೇರಿ ಪ್ರಾಬಲ್ಯದ ಪ್ರದೇಶದಲ್ಲಿ ಪ್ರಸ್ತುತ 98 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಅವರು ಹೇಳಿದರು. ಧಾರಾವಿಯ ಜತೆಗೆ ದಾದರ್ ಮತ್ತು ಮಹೀಮ್ ಮುಂತಾದ ಪ್ರದೇಶಗಳನ್ನು ಒಳಗೊಂಡಿರುವ ಐ ನಾರ್ಥ್ ವಾರ್ಡ್‌ನಲ್ಲಿ ಈವರೆಗೆ 7,797 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು.
ಆಗಸ್ಟ್‌ನಲ್ಲಿ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯದಲ್ಲಿ ಶೇ. 116ರಷ್ಟು ಹೆಚ್ಚಾಗಿದೆ. ಸಕಾರಾತ್ಮಕತೆಗಾಗಿ ಅದರ 30 ದಿನಗಳ ಚಲಿಸುವ ಬೆಳವಣಿಗೆ ದರವು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು ಆಗಸ್ಟ್ 1ರಂದು 10,862ರಿಂದ ಆಗಸ್ಟ್ 31ರಂದು 23,488ಕ್ಕೆ ಏರಿದೆ. ಇದು ಜನವರಿ 30ರಂದು ಮೊದಲ ದೃಢಪಡಿಸಿದ ಪ್ರಕರಣದ ಬಳಿಕ 30 ದಿನಗಳಲ್ಲಿ ಅತಿದೊಡ್ಡ ಏರಿಕೆಯಾಗಿದೆ. ಇವುಗಳಲ್ಲಿ 2,660 ಪ್ರಕರಣಗಳು ದಾದರ್ ಮತ್ತು 2,337 ಮಹೀಮ್‌ನಿಂದ ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
…………………………………………………………………………………………………………………………………………………….
424 ಪೊಲೀಸರಿಗೆ ಸೋಂಕು, ಐವರ ಸಾವು : ಮುಂಬಯಿ, ಸೆ. 4: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ 424 ಪೊಲೀಸರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಐವರು ಪೊಲೀಸರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಹೊಸ ಪ್ರಕರಣಗಳ ಪತ್ತೆಯೊಂದಿಗೆ ರಾಜ್ಯ ಪೊಲೀಸ್ ಪಡೆಯಲ್ಲಿ ಸೋಂಕಿತರ ಸಂಖ್ಯೆ 16,015ಕ್ಕೆ ತಲುಪಿದೆ. ಈವರೆಗೆ 1,366 ಅ ಕಧಿಾರಿಗಳು ಸೇರಿದಂತೆ 13,014 ಪೊಲೀಸರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅದೇ ಹೊಸ 5 ಸಾವುಗಳೊಂದಿಗೆ ಇಲಾಖೆಯಲ್ಲಿನ ಮೃತರ ಸಂಖ್ಯೆ 163ಕ್ಕೆ ಏರಿದೆ ಎಂದವರು ತಿಳಿಸಿದ್ದಾರೆ. ಮೃತರಲ್ಲಿ 15 ಮಂದಿ ಅಧಿಕಾರಿಗಳಾಗಿದ್ದು, ಉಳಿದವರು ಇತರ ಶ್ರೇಣಿಯ ಸಿಬಂದಿಗಳಾಗಿದ್ದಾರೆ. ಪ್ರಸ್ತುತ 2,838 ಮಂದಿ ಪೊಲೀಸರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.