ಬೆಂಗಳೂರು: ಹೊಸ ವರ್ಷದಿಂದೀಚೆಗೆ ಮೊದಲ ಬಾರಿ ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ಪ್ರಕರಣಗಳು ಒಂದು ಸಾವಿರ ಗಡಿದಾಟಿವೆ. ಮಂಗಳವಾರ 1,135 ಮಂದಿಗೆ ಸೋಂಕು ತಗುಲಿದ್ದು, ಆರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ವರ್ಷ ಡಿ.25 ರಂದು 1,005 ಹೊಸ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಪ್ರಕರಣಗಳು ಇಳಿಮುಖವಾಗಿ ಸಾಗಿ 200 ಆಸುಪಾಸಿಗೆ ತಲುಪಿದ್ದವು. ಮತ್ತೆ 80 ದಿನಗಳ ನಂತರ, 2021 ರಲ್ಲಿ ಮೊದಲ ಬಾರಿ ಒಂದೇ ದಿನದಲ್ಲಿ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಅತಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ 710, ಮೈಸೂರು 58, ದಕ್ಷಿಣ ಕನ್ನಡ 50, ಕಲಬುರಗಿ 46, ಬೆಂಗಳೂರು ಗ್ರಾಮಾಂತರ 38, ತುಮಕೂರು, ಬೀದರ್ ಹಾಗೂ ಉಡುಪಿ ತಲಾ 32, ಬೆಳಗಾವಿ 12, ಹಾಸನ 15, ವಿಜಯಪುರ 13, ಚಿಕ್ಕಬಳ್ಳಾಪುರ 14, ಚಿತ್ರದುರ್ಗ 11 ಹೊರತುಪಡಿಸಿದರೆ ರಾಜ್ಯದ ಬಾಕಿ 16 ಜಿಲ್ಲೆಗಳಲ್ಲಿ ಬೆರಳೆಣಿಕೆ, ಚಾಮರಾಜನಗರ, ಹಾವೇರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನ ಮೂರು ಮಂದಿ, ಧಾರವಾಡ, ಮೈಸೂರು, ಕಲಬುರಗಿಯ ತಲಾ ಒಬ್ಬರು ಸೇರಿ ಆರು ಮಂದಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು
ಸತತ ಏಳು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಸಾಗಿದ್ದ ಕೊರೊನಾ ಪ್ರಕರಣಗಳು ಸೋಮವಾರ ಎರಡು ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ, ಮಂಗಳವಾರ ಒಂದು ಸಾವಿರ ಗಡಿದಾಟಿರುವುದು ಆತಂಕ ಹೆಚ್ಚಿಸಿದೆ. ಸೋಂಕು ಇದೇ ರೀತಿ ಏರಿಕೆಯಲ್ಲೆ ಸಾಗಿದರೆ ಮತ್ತೆ ಲಾಕ್‌ಡೌನ್ ಸಾಧ್ಯತೆಗಳು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ 68,479 ಪರೀಕ್ಷೆಗಳು ನಡೆದಿವೆ. ರಾಜ್ಯದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 9.62 ಲಕ್ಷಕ್ಕೆ ಹೆಚ್ಚಳವಾಗಿದ್ದು, 9.4 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 12403 ಸೋಂಕಿತರು ಸಾವಿಗೀಡಾಗಿದ್ದಾರೆ. 9,428 ಸೋಂಕಿತರು ಆಸ್ಪತ್ರೆ, ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಈ ಪೈಕಿ 129 ಮಂದಿ ಪರಿಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.