Advertisement

ಒಬಿಸಿ ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌: ಕೋಟ ಶ್ರೀನಿವಾಸ ಪೂಜಾರಿ

01:49 AM May 29, 2021 | Team Udayavani |

ಮಂಗಳೂರು: ಕೊರೊನಾ ನಿಯಂತ್ರಣದ ಹಿನ್ನೆಲೆ ಯಲ್ಲಿ ಇಲಾಖೆ ಹಾಗೂ ಜಿಲ್ಲಾಡಳಿತ ಜತೆಯಾಗಿ ಸ್ಪಂದಿಸಿದರೆ ನಿರ್ವಹಣೆ ಸುಲಭ. ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಲವಾರು ಮಹತ್ವದ ಕಾರ್ಯಗಳನ್ನು ನಡೆಸಲಾಗಿದೆ. ಇಲಾಖೆ ವ್ಯಾಪ್ತಿಗೆ ಬರುವ ಅರ್ಚಕರು/ಸಿಬಂದಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ದ.ಕ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ತಂಡದ ಜತೆಗೆ ಸ್ಪಂದಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೊರೊನಾ ನಿಯಂತ್ರಣ ಕ್ಕಾಗಿ ಸರಕಾರ ಕೈಗೊಂಡಿರುವ ಕ್ರಮಗಳ ಬಗೆಗೆ ಮಾಹಿತಿ ನೀಡಿದರು.

Advertisement

– ಕೊರೊನಾ ನಿಯಂತ್ರಣಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವ ರೀತಿ ಸ್ಪಂದಿಸಲಾಗುತ್ತಿದೆ?
ಲಾಕ್‌ಡೌನ್‌ ಕಾರಣದಿಂದ ದೇಗುಲಗಳು ತೆರೆ ಯದೇ ಇರುವ ಕಾರಣದಿಂದ ದೇಗುಲಕ್ಕೆ ಆರ್ಥಿಕ ವಾಗಿ ಒಂದಷ್ಟು ಸವಾಲು ಎದುರಾಗಿದೆ. ಜತೆಗೆ ಅರ್ಚಕರು ಸಮಸ್ಯೆಯಲ್ಲಿದ್ದರು. ಹೀಗಾಗಿ ದೇಗುಲಗಳ ಅರ್ಚಕರಿಗೆ 3 ತಿಂಗಳ ಮುಂಗಡ ತಸ್ತೀಕ್‌ ಅನ್ನು ತತ್‌ಕ್ಷಣವೇ ಬಿಡುಗಡೆ ಮಾಡಿ ಇಲಾಖೆಯಿಂದ ಆದೇಶಿಸ ಲಾಗಿದೆ. ಸದ್ಯ ಕೊರೊನಾ ನೆಲೆಯಲ್ಲಿ ದೇಗುಲದ ಆಡಳಿತಾತ್ಮಕ ವ್ಯವಸ್ಥೆ, ಸೇವಾ ವ್ಯವಸ್ಥೆಗಳು ಸ್ಥಗಿತವಾಗಿ ವಿವಿಧ ಚಟುವಟಿಕೆಗಳು ನಿಂತಿವೆ. ಹೀಗಾಗಿ ದೇಗುಲಗಳಿಗೆ ನೆರವಾಗುವ ನೆಲೆಯಲ್ಲಿ ಸರಕಾರದಿಂದ ಎಲ್ಲ ಸಹಾಯ ನೀಡಲು ಪ್ರಯತ್ನಿಸಲಾಗುವುದು. ಕೊರೊನಾ ಹತೋಟಿಗೆ ಬಂದ ಬಳಿಕ “ಸಪ್ತಪದಿ’ ಕಾರ್ಯಕ್ರಮವನ್ನು ಪುನರಾರಂಭಿಸಲಾಗುತ್ತದೆ.

– ದೇಗುಲದ ಸಿಬಂದಿಗೆ ಆಹಾರದ ಕಿಟ್‌ ಒದಗಿಸಲಾಗುತ್ತಿದೆಯೇ?
ಹೌದು. “ಸಿ’ ದರ್ಜೆಯ ದೇಗುಲ ದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರು ಹಾಗೂ ಸಿಬಂದಿಗೆ ಆಯಾಯ ಜಿಲ್ಲೆಯ ಅನ್ನ ದಾಸೋಹ ನಡೆಸುವ “ಎ’ ಹಾಗೂ “ಬಿ’ ದರ್ಜೆಯ ದೇಗುಲದಿಂದ ಅಕ್ಕಿ ಹಾಗೂ ಇತರ ದವಸ ಧಾನ್ಯ ಗಳನ್ನು ಕಿಟ್‌ಗಳ ರೂಪದಲ್ಲಿ ತಯಾರಿಸಿ ನೀಡಲು ಸೂಚಿಸಲಾಗಿದೆ. ಉಳಿಕೆ ಆಹಾರ ಧಾನ್ಯ ಗಳನ್ನು ಕಷ್ಟದಲ್ಲಿರುವ ಸಾರ್ವಜನಿಕರಿಗೆ ಕಿಟ್‌ ರೂಪದಲ್ಲಿ ನೀಡಲು ಸೂಚಿಸಲಾಗಿದೆ.

– ಲಾಕ್‌ಡೌನ್‌ ವೇಳೆಯಲ್ಲಿ ದೇಗುಲದಿಂದ ಊಟದ ವ್ಯವಸ್ಥೆ ಜಾರಿ ಮಾಡಲಾಗಿದೆಯೇ?
ಕಳೆದ ವರ್ಷದಂತೆ ಅಗತ್ಯವಿರುವ ಕಡೆಗಳಿಗೆ ಊಟದ ವ್ಯವಸ್ಥೆ ನೀಡಲು ಈ ಬಾರಿಯೂ ತೀರ್ಮಾನ ಮಾಡಲಾಗಿದೆ. ಸದ್ಯ ಈ ಬಗ್ಗೆ ಪರಾಮರ್ಶೆ ನಡೆಸಲಾ ಗುತ್ತಿದ್ದು, ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಉಳಿದಂತೆ ದೇಗುಲದಿಂದ ಇತರ ನೆರವು ಒದಗಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಯಾವ ಕ್ರಮ ಕೈಗೊಳ್ಳಲಾಗಿದೆ?
ಹಿಂದುಳಿದ ವರ್ಗದ ಇಲಾಖೆಯಡಿ ರಾಜ್ಯದಲ್ಲಿ 2,400ಕ್ಕೂ ಅಧಿಕ ಹಾಸ್ಟೆಲ್‌ಗ‌ಳಿವೆ. 2 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಸದ್ಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇಲ್ಲದ ಕಾರಣದಿಂದ ಬಹುತೇಕ ಎಲ್ಲ ಹಾಸ್ಟೆಲ್‌ಗ‌ಳು ಈಗ ಖಾಲಿ ಇದೆ. ಹೀಗಾಗಿ ಹಾಸ್ಟೆಲ್‌ಗ‌ಳನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲು ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಎಲ್ಲ ಹಾಸ್ಟೆಲ್‌ಗ‌ಳಲ್ಲಿ ಕುಡಿಯುವ ನೀರು, ಬೆಡ್‌ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.

Advertisement

– ಪ್ರಸ್ತುತ ಯಾವ ಭಾಗದ ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ?
ರಾಜ್ಯದ ಯಾವುದೇ ಭಾಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸುವುದಾದರೂ ಅಲ್ಲಿನ ಜಿಲ್ಲಾಡಳಿತ ಮೊದಲ ಆದ್ಯತೆಯಾಗಿ ಇಲಾಖೆಯ ಹಾಸ್ಟೆಲ್‌ಗ‌ಳನ್ನು ಆಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಆಯಾಯ ಜಿಲ್ಲಾಡಳಿತ ಮನವಿ ಮಾಡಿದ್ದೇ ಆದಲ್ಲಿ ಅಲ್ಲಿನ ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗುವುದು. ಈಗಾಗಲೇ ಮಂಗಳೂರು, ಪುತ್ತೂರು, ಬಂಟ್ವಾಳದಲ್ಲಿ ಇದು ಅನುಷ್ಠಾನವಾಗಿದೆ.

ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜತೆಗೆ ಚೇತರಿಕೆ ದರ ಶೇ.85ಕ್ಕೂ ಅಧಿಕವಿದೆ. ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಬೆಡ್‌ ಹಾಗೂ ಆಕ್ಸಿಜನ್‌ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತೀ ಆಸ್ಪತ್ರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆ ಯ ಲಾಗಿದೆ. ಲಸಿಕೆ ಲಭ್ಯತೆಗೆ ಅನುಗುಣವಾಗಿ ವಿತರಣೆಗೆ ಆದ್ಯತೆ ನೀಡಲಾಗಿದೆ. ವಿವಿಧ ಕಂಪೆನಿ, ಸಮಾಜಮುಖೀ ಸಂಘಟನೆಗಳು ಜಿಲ್ಲಾಡಳಿತಕ್ಕೆ ನೆರವಾಗುತ್ತಿದೆ. ತಜ್ಞರ ಆತಂಕದ ಕಾರಣದಿಂದ 3ನೇ ಅಲೆ ಎದುರಾದರೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಈಗಾಗಲೇ ಮಕ್ಕಳ ತಜ್ಞ ವೈದ್ಯರ ಸಭೆಯನ್ನೂ ಕರೆಯಲಾಗಿದೆ. ಎಲ್ಲ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್‌ ನರ್ಸ್‌ ಹಾಗೂ ವೈದ್ಯಕೀಯ ಸಿಬಂದಿ ನಿಯೋಜನೆಗೆ ಸೂಚಿಸಲಾಗಿದೆ.

– ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next