ಬಾದಾಮಿ: ಗ್ರಾಮೀಣ ಭಾಗದ ಕೋವಿಡ್ ಸೋಂಕಿತರಿಗೆ ಮತ್ತು ಮನೆಯಲ್ಲಿ ಐಸೋಲೇಶನ್ ಸಾಧ್ಯತೆಯಿರದ ರೋಗಿಗಳಿಗೆ ಗುಣಮಟ್ಟದ ಆರೈಕೆ, ಸೇವೆ ಮತ್ತು ಮಾನಸಿಕ ನೆಮ್ಮದಿ ನೀಡುವ ಸದುದ್ದೇಶದಿಂದ ಕೋವಿಡ್ ಆರೈಕೆ ಕೇಂದ್ರ ಆರಂಭ ಆರಂಭಿಸಿರುವುದು ಬಡವರಿಗೆ ಸಹಾಯಕವಾಗಲಿದೆ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಹೇಳಿದರು.
ಪಟ್ಟಣದ ಶ್ರೀ ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಸಂಚಾಲಿತ ಗುಳೇದಗುಡ್ಡ ಮತ್ತು ಶ್ರೀ ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ತನ್ನ ಸ್ವಾರ್ಥಕ್ಕೆ ಜೀವಜಲ, ಪ್ರಕೃತಿಯನ್ನು ಹಾಳು ಮಾಡುತ್ತಾ, ಸಸ್ಯ ಸಂಕುಲ ಕಡಿದು ಹಾಕುತ್ತಿದ್ದೇವೆ. ಆಮ್ಲಜನಕ ಹೇಗೆ ನಮಗೆ ಸಿಗಲು ಸಾಧ್ಯ ಎಂದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎಲ್ಲರೂ ಪರೋಪಕಾರಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು .ಎಸ್‌ವಿಪಿ ಆಯುರ್ವೇದ ಮಹಾವಿದ್ಯಾಲಯದ ಚೇರಮನ್ ಮಹಾಂತೇಶ ಮಮದಾಪುರ ಮಾತನಾಡಿದರು.
ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸೇವಾ ಭಾರತಿ ಅಧ್ಯಕ್ಷ ಸಂಜೀವ ಕಾರಕೂನ ಹಾಜರಿದ್ದರು. ಬಾಬು ರಾಜೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ಘನಶಾಮಜಿ ರಾಠಿ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರಾಚಾರ್ಯ ಡಾ| ಬಿ.ಎಂ.ಮುಲ್ಕಿಪಾಟೀಲ, ಗಿರೀಶ ದಾನಪ್ಪಗೌಡರ, ಮುತ್ತು ಉಳ್ಳಾಗಡ್ಡಿ, ಡಾ| ಬಸವರಾಜ ಗಂಗಲ್ಲ, ಬಸವರಾಜ ಯಂಕಂಚಿ, ಕಾರ್ಯದರ್ಶಿ ಸಂಗಮೇಶ ಹುನಗುಂದ, ಸಿಬ್ಬಂದಿ ಹಾಜರಿದ್ದರು. ಕಿರಣ ಪವಾಡಶೆಟ್ಟರ ಸ್ವಾಗತಿಸಿದರು.