ಕುಮಟಾ: ಪಟ್ಟಣದ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ಕುಮಟಾ ಮೂಲದ 26 ವರ್ಷದ ವ್ಯಕ್ತಿಯೊಬ್ಬನಿಗೆ ಹಾಗೂ ಭಟ್ಕಳದ ಎರಡು ವರ್ಷದ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇವರಿಬ್ಬರಿಗೂ ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನ ಜನತೆ ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ ತಿಳಿಸಿದ್ದಾರೆ.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು, ಕುಮಟಾ ಮೂಲದ ವ್ಯಕ್ತಿ ಮೇ 5ರಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಮೀನು ಸಾಗಿಸುವ ಲಾರಿಯಲ್ಲಿ ಸಹಾಯಕನೆಂದು ಹೇಳಿಕೊಂಡು ಕುಮಟಾಕ್ಕೆ ಆಗಮಿಸುವಾಗ ಪೊಲೀಸರು ಅನುಮಾನಗೊಂಡು ತಾಲೂಕಿನ ಹಿರೇಗುತ್ತಿ ತನಿಖಾ ಠಾಣೆಯಲ್ಲಿ ಲಾರಿ ತಡೆದು ವಿಚಾರಿಸಿದ್ದಾರೆ. ನಂತರ ಆತ ಕುಮಟಾ ಮೂಲದ ವ್ಯಕ್ತಿ ಎಂದು ಹೇಳಿದಾಗ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ತಾಲೂಕಾಡಳಿತ ಆತನನ್ನು
ವೈದ್ಯಕೀಯ ತಪಾಸಣೆ ನಡೆಸಿ, ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಕಳೆದ ಶನಿವಾರ ಆತನ ಗಂಟಲಿನ ದ್ರವ ಹಾಗೂ ರಕ್ತದ ಮಾದರಿ ತೆಗೆದು ಲಾಬ್‌ಗ ಕಳುಹಿಸಲಾಗಿತ್ತು. ವರದಿಯಲ್ಲಿ ಆತನಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದರು.
ಮಹಾರಾಷ್ಟ್ರದಿಂದ ಬಂದ ಲಾರಿ ಚಾಲಕನನ್ನು ವಾಪಸ್ಸು ರತ್ನಾಗಿರಿಗೆ ಕಳುಹಿಸಲಾಗಿದ್ದು, ಈತನು ಯಾರ ಸಂಪರ್ಕವನ್ನೂ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ 14 ದಿನ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ಕೆಲವರು ಸರ್ಕಾರಿ ಕ್ವಾರಂಟೈನ್ ಬೇಡವೆಂದು ಹೇಳುತ್ತಿದ್ದಾರೆ. ಅವರಿಗೆ ಹೊಟೇಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಕ್ವಾರಂಟೈನ್ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಕಳೆದ 60 ದಿನದಿಂದ ಕುಮಟಾದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೆ ಹೊರಗಿನಿಂದ ಬಂದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಹೊರಗಿನಿಂದ ಬರುವ ಪ್ರತಿಯೊಬ್ಬರೂ ನ್ಯಾಯಯುತವಾಗಿ ಆಗಮಿಸಿ, ಆರೋಗ್ಯ ಇಲಾಖೆಗೆ ಹಾಗೂ ತಾಲೂಕಾಡಳಿತಕ್ಕೆ ಮಾಹಿತಿ ನೀಡಿ, ತಪಾಸಣೆ ನಡೆಸಿಕೊಳ್ಳಬೇಕು ಎಂದರು.
ರತ್ನಾಗಿರಿಯಿಂದ ಆಗಮಿಸಿದ ರೋಗಿ ಸಂಖ್ಯೆ 946 ವ್ಯಕ್ತಿಯನ್ನು ನೇರವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಕ್ವಾರಂಟೈನ್‌ನಲ್ಲಿದ್ದ ಕೆಲ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಈತನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನೂ ಸಹ ಪುನಃ ಕ್ವಾರಟೈನ್‌ಗೆ ಒಳಪಡಿಸಿ, ಅವರ ಗಂಟಲಿನ ದ್ರವವನ್ನು ಲ್ಯಾಬ್‌ಗ ಕಳುಹಿಸಲಾಗುತ್ತದೆ. ಸರ್ಕಾರಿ ಕ್ವಾರಂಟೈನ್ ಸುತ್ತಲೂ ಕಂಟೆಂಟ್‌ಮೆಂಟ್ ಝೋನ್ ಆಗಿ ಪರಿವರ್ತಿಸಿ, ಅನಗತ್ಯವಾಗಿ ಯಾರಿಗೂ ಪ್ರವೇಶವನ್ನು ನೀಡಲಾಗುವುದಿಲ್ಲ ಎಂದ ಅವರು, ಜನರು ಅನಗತ್ಯವಾಗಿ ಗಾಳಿ ಸುದ್ದಿಗೆ, ತಪ್ಪು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ಹೊರಗಿನಿಂದ ಬಂದ ವ್ಯಕ್ತಿಗಳ ಗಂಟಲ ದ್ರವವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕ್ವಾರಂಟೈನ್‌ನಲ್ಲಿದ್ದ 10 ಜನರ ಗಂಟಲಿನ ದ್ರವವನ್ನು ಒಮ್ಮೆಲೆ ಪರೀಕ್ಷೆ ನಡೆಸಲಾಗುತ್ತದೆ. ಪ್ರತ್ಯೇಕವಾಗಿ ಪರೀಕ್ಷೆ ನಡೆಸುವುದರಿಂದ ಸಮಯ ವ್ಯರ್ಥವಾಗುತ್ತದೆಯಲ್ಲದೇ, ಆ ವರದಿಯಲ್ಲಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಒಬ್ಬರ ಗಂಟಲಿನ
ದ್ರವ ಪರೀಕ್ಷೆ ನಡೆಸಲಾಗುತ್ತದೆ. ನೆಗೆಟಿವ್ ಬಂದರೆ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಲಾಗುತ್ತದೆ ಎಂದ ಅವರು, ವರದಿ ಪಾಸಿಟಿವ್ ಬಂದು, ರೋಗದ ಲಕ್ಷಣಗಳಿಲ್ಲದಿದ್ದರೆ ಅವರಿಗೆ ತಾಲೂಕಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಕುಮಟಾ ಸಹಾಯಕ ಆಯುಕ್ತ ಎಂ. ಅಜಿತ್, ತಹಶೀಲ್ದಾರ್ ಮೇಘರಾಜ ನಾಯ್ಕ, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ| ಅಶೋಕಕುಮಾರ, ಸಿಪಿಐ ಪರಮೇಶ್ವರ ಗುನಗಾ, ತಾ.ಪಂ ಇಒ ಸಿ.ಟಿ.ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಆಜ್ಞಾ ನಾಯಕ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಸೇರಿದಂತೆ ಮತ್ತಿತರರು ಇದ್ದರು.
ಕಾರವಾರದ ಮೆಡಿಕಲ್ ಕಾಲೇಜಿನವಿಶೇಷ ವಾರ್ಡ್‌ನಲ್ಲಿ ಕೋವಿಡ್ ಸೋಂಕಿತರಿಗೆ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭಟ್ಕಳ, ಶಿರಸಿ ಹಾಗೂ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯ ವಿಶೇಷ ವಾರ್ಡ್ ನಿರ್ಮಿಸಲಾಗುತ್ತದೆ. ಕೋವಿಡ್ ಸೋಂಕಿತರಿಗೆ ಅಲ್ಲಿಯೇ ಚಿಕಿತ್ಸೆ ಒದಗಿಸಲಾಗುತ್ತದೆ.
ಡಾ| ಕೆ. ಹರೀಶಕುಮಾರ, ಜಿಲ್ಲಾಧಿಕಾರಿ