ಬೆಂಗಳೂರು: ಬೆಂಗಳೂರು: ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಬೆಂಗಳೂರು ಜಲಮಂಡಳಿ ನಿರ್ಧಾರಕ್ಕೆ ರಾಜ್ಯ ಸರ್ಕಾರದ ಅನುಮತಿ ಸಿಕ್ಕಿಲ್ಲ. ಫೆಬ್ರವರಿಯಲ್ಲೇ ಜಲಮಂಡಳಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ.
ಹೀಗಾಗಿ, ಈ ವರ್ಷ ನೀರಿನ ದರ ಏರಿಕೆ ಅನುಮಾನವಾಗಿದ್ದು, 2021 ಏಪ್ರಿಲ್‌ವರೆಗೂ ರಾಜಧಾನಿಯ ನಾಗರಿಕರು ನೀರಿನ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಂಡಂತಾಗಿದೆ. ಈ ಹಿಂದೆ 2014ರಲ್ಲಿ ಕಾವೇರಿ ನೀರಿನ ದರ ಹೆಚ್ಚಳವಾಗಿತ್ತು. ಪ್ರತಿ ವರ್ಷ ಬೆಸ್ಕಾಂ ಶುಲ್ಕ, ಸಿಬ್ಬಂದಿಸಂಬಳ, ಯೋಜನೆಗಳ ನಿರ್ವಹಣೆ ವೆಚ್ಚ ಹೆಚ್ಚಳವಾಗಿದೆ ಎಂದು 2019ರಲ್ಲಿ ಶೇ. 15- 20 ರಷ್ಟು ದರ ಪರಿಷ್ಕರಣೆಗೆ ಮುಂದಾಗಿತ್ತು. ಆದರೆ, ಸಾರ್ವಜನಿಕರಿಗೆ ಹೊರೆಯಾಗುತ್ತದೆ ಎಂದು ಜಲಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಲಿಲ್ಲ.
ಹೀಗಾಗಿ, ಅರ್ಥಿಕ ನಷ್ಟ ಸರಿತೂಗಿಸುವ ನಿಟ್ಟಿನಲ್ಲಿ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಮಾತ್ರ ಹೆಚ್ಚಳ ಮಾಡುವಂತೆ ಅಭಿಪ್ರಾಯ ಕೇಳಿಬಂದಿತ್ತು. ಹೀಗಾಗಿ, ಮತ್ತೆ ಮೂರು ಮಾದರಿಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಎಂಟು ತಿಂಗಳಾದರೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಒಂದು ವೇಳೆ ಚರ್ಚೆಗೆ ಬಂದರೂ ಕೋವಿಡ್ ಸಂಕಷ್ಟದಿಂದಾಗಿ ಪ್ರಸಕ್ತ ವರ್ಷ ದರ ಪರಿಷ್ಕರಣೆಗೆ ಅನುಮತಿ ಸಿಗುವುದು ಅನುಮಾನ ಎಂದು ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಇನ್ನಷ್ಟು ಹೊರೆ: ಲಮಂಡಳಿಗೆ ಗೃಹ ಬಳಕೆದಾರರಿ ಗಿಂತಲೂ ವಾಣಿಜ್ಯ ಬಳಕೆದಾರರಿಂದ ಹೆಚ್ಚಿನ ಆದಾಯ ಬರುತ್ತದೆ. ಸದ್ಯ ಸೋಂಕಿನಿಂದ ನಗರ ಸುತ್ತಮುತ್ತಲ ಕಾರ್ಖಾನೆಗಳು, ಐಷಾರಾಮಿ ಹೋಟೆಲ್‌ಗಳು, ಕ್ಲಬ್‌ಗಳು ಖಾಸಗಿ ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ವೇಳೆ ನೀರಿನ ದರ ಹೆಚ್ಚಳ ಮಾಡಿದರೆ ಅವರಿಗೆಇನ್ನಷ್ಟು ಹೊರೆಯಾಗಲಿದೆ. ಹೀಗಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ದರ ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ ನೀಡಬಹುದು ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ದರ ಹೆಚ್ಚಳ ಅನಿವಾರ್ಯ?: ಪ್ರತಿ ತಿಂಗಳು ಜಲಮಂಡಳಿ 120 ಕೋಟಿ ರೂ. ಆದಾಯ ಸಂಗ್ರಹಿಸುತ್ತದೆ. ಅದರಲ್ಲಿ 80 ಕೋಟಿ ರೂ. ವಿದ್ಯುತ್ ಶುಲ್ಕಕ್ಕೆ ವ್ಯಯಿಸಬೇಕು. ಉಳಿದ ಹಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಿಬ್ಬಂದಿ ಸಂಬಳ, ಯೋಜನೆಗಳ ನಿರ್ವಹಣಾ ವೆಚ್ಚ ಕಷ್ಟವಾಗುತ್ತಿದೆ. ಇದರಿಂದ ನೀರಿನ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು. ಅಲ್ಲದೆ, ಕೊರೊನಾ ಹಿನ್ನೆಲೆ ಮಾಸಿಕ ಆದಾಯ ಸಂಗ್ರಹದಲ್ಲಿ ತೊಡಕಾಗಿದೆ. ಮಾರ್ಚ್ ನಿಂದ ಜುಲೈವರೆಗೂ ಪ್ರತಿ ತಿಂಗಳು 100 ಕೋಟಿ ರೂ.ಕಡಿಮೆ ಆದಾಯ ಸಂಗ್ರಹವಾಗಿದೆ.
ದರ ಪರಿಷ್ಕರಣೆ ಕುರಿತು ಫೆಬ್ರವರಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೂ ಸರ್ಕಾರದಿಂದಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಅನುಮತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. –
ಎನ್. ಜಯರಾಮ್ , ಅಧ್ಯಕ್ಷರು, ಬೆಂಗಳೂರು ಜಲಮಂಡಳಿ
-ಜಯಪ್ರಕಾಶ್ ಬಿರಾದಾರ್