Advertisement

ಕೋವಿಡ್ ಆತಂಕ: ಕಾರ್ಮಿಕರ ಕೊರತೆ ಹಿನ್ನೆಲೆ: ಆ.1ರಿಂದ ಮೀನುಗಾರಿಕೆ ಆರಂಭ ಅನುಮಾನ

09:55 AM Jul 09, 2020 | mahesh |

ಮಂಗಳೂರು: ಮಳೆಗಾಲ ಋತುವಿನ ಮೀನುಗಾರಿಕೆ ನಿಷೇಧವು ಜು.31ಕ್ಕೆ ಮುಕ್ತಾಯವಾಗಲಿದ್ದು, ಕರಾವಳಿ ಭಾಗದಲ್ಲಿ ಆಗಸ್ಟ್‌ 1ರಿಂದ ಮೀನುಗಾರಿಕೆ ಪ್ರಾರಂಭಗೊಳ್ಳಬೇಕು. ಆದರೆ, ಈ ಬಾರಿ ಕೋವಿಡ್ ಮತ್ತು ಕಾರ್ಮಿಕರ ಸಮಸ್ಯೆಯಿಂದಾಗಿ ಮೀನುಗಾರಿಕೆ ಆರಂಭಗೊಳ್ಳುವುದು ಬಹು ತೇಕ ಅನುಮಾನವಾಗಿದೆ.  ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಪರ್ಸಿನ್‌ ಹಾಗೂ ಟ್ರಾಲ್‌ ಸೇರಿ ಒಟ್ಟು 1,200 ಹಾಗೂ ಮಲ್ಪೆಯಲ್ಲಿ ಸುಮಾರು 1,800 ಬೋಟುಗಳಲ್ಲಿ 25 ಸಾವಿರಕ್ಕಿಂತಲೂ ಹೆಚ್ಚಿನ ಮಂದಿ ಮೀನುಗಾರಿಕೆಯಲ್ಲಿ ನೇರವಾಗಿ ನಿರತರಾಗಿರುತ್ತಾರೆ ಇವರಲ್ಲಿ ಶೇ.75 ಮಂದಿ ಆಂಧ್ರ, ಒಡಿಸ್ಸಾ,ತಮಿಳುನಾಡು ಸಹಿತ ಹೊರ ರಾಜ್ಯಗಳಿಗೆ ಸೇರಿದವರು. ಇದಲ್ಲದೆ ಐಸ್‌ ಪ್ಲಾಂಟ್‌ ಹಾಗೂ ಫಿಶ್‌ಮಿಲ್‌ಗ‌ಳಲ್ಲೂ ಹೊರ ರಾಜ್ಯಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಹಾವಳಿಯಿಂದ ಬಹುತೇಕ ಕಾರ್ಮಿಕರು ಊರಿಗೆ ತೆರಳಿದ್ದಾರೆ.  ರೈಲುಗಳ ಸಂಚಾರ ಇನ್ನೂ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಆ.1ಕ್ಕೆ ಮರಳಿ ಬರುವುದು ಸಂದೇಹವಾಗಿದೆ ಮರಳಿ ಬಂದರೂ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಲ್ಲದೆ ಕೊರೊನಾ ಪರೀಕ್ಷೆಯ ವೈದ್ಯಕೀಯ ಪ್ರಮಾಣ ಪತ್ರವೂ ಹೊಂದಿರುವುದು ಅಗತ್ಯವಾಗಿದೆ.

Advertisement

ಉಭಯ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು
ತೀವ್ರಗತಿಯಲ್ಲಿ ಏರುತ್ತಿರುವ ಕಾರಣ ಜನ ಸಂದಣಿಗೆ ಅವಕಾಶ ನೀಡಿದರೆ ಸೋಂಕು ಉಲ್ಬಣವಾಗುವ ಆತಂಕವಿದೆ. ಮೀನುಗಾರಿಕೆ ಆರಂಭಗೊಂಡ ಬಳಿಕ ಪ್ರತಿದಿನ ದಕ್ಕೆಯಲ್ಲಿ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಜನದಟ್ಟಣೆ ಇರುತ್ತದೆ. ಹೀಗಾಗಿ ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡಾ ಕಷ್ಟಸಾಧ್ಯ. ಈ ಕಾರಣಕ್ಕಾಗಿ ಮೀನುಗಾರಿಕೆ ಆರಂಭಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸುವುದು ಅನುಮಾನವಾಗಿದೆ. ಆದರೆ ಒಟ್ಟಾರೆ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಕಳೆದ ಋತುವಿನಲ್ಲಿ ಹವಾಮಾನ ವೈಪರೀತ್ಯ ಹಾಗೂ ಕೊರೊನಾ ಲಾಕ್‌ಡೌನ್‌ ನಿಂದಾಗಿ ಮೀನುಗಾರಿಕೆ ತೀವ್ರ ಬಾಧಿತವಾಗಿತ್ತು, ಸಂಕಷ್ಟದಲ್ಲಿರುವ ಮೀನುಗಾರಿಕೆ ಕ್ಷೇತ್ರ ಈ ಸವಾಲು ನಿಭಾಯಿಸಿಕೊಂಡು ಮುಂದುವರಿಯಬೇಕಾಗಿದೆ ಎಂದು ಮಂಗಳೂರು ಟ್ರಾಲ್‌ ಬೋಟ್‌ ಮೀನು ಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಸಂಕಷ್ಟದಲ್ಲಿ ಮೀನುಗಾರಿಕೆ
ಕಳೆದ ಋತು ಮೀನುಗಾರಿಕೆಗೆ ಆಶಾದಾಯಕವಾಗಿರಲಿಲ್ಲ. ಹವಾಮಾನ ವೈಪರೀತ್ಯ ಮತ್ತು ಕೋವಿಡ್ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆ ಬಂದ್‌ ಆಗಿತ್ತು. ಮೀನುಗಾರಿಕೆ ಅವಧಿಯಲ್ಲೂ ಮೀನಿನ ಕೊರತೆಯಿಂದಾಗಿ ಸಾಕಷ್ಟು ಬೋಟುಗಳ ಮಾಲಕರು ನಷ್ಟ ಅನುಭವಿಸಿದ್ದರು. ಪ್ರಸ್ತುತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಮುಂದಿನ ಋತುವಿನ ಬಗ್ಗೆಯೂ ಅನಿಶ್ಚಿತತೆ ಕಾಡುತ್ತಿದೆ.

ಶೀಘ್ರ ಜಿಲ್ಲಾಡಳಿತದ ಸಭೆ
ಮೀನುಗಾರಿಕೆ ಕ್ಷೇತ್ರಕ್ಕೆ ಕೋವಿಡ್ ಬಹುದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. ಮೀನುಗಾರಿಕೆ ನಡೆಸಲು ಸಮಸ್ಯೆ ಇಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು. ಈ ಬಗ್ಗೆ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮೀನುಗಾರ ಮುಖಂಡರ ಜತೆ ಶೀಘ್ರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ,  ಮೀನುಗಾರಿಕಾ ಮತ್ತು ಬಂದರು ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next