Advertisement

ಜೆಜೆಎಂ ಕಾಮಗಾರಿಗೆ ಕೊರೊನಾ, ಮಳೆ ಹೊಡೆತ

12:27 AM Dec 31, 2021 | Team Udayavani |

ಉಡುಪಿ: ಪ್ರತೀ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯು ಕೊರೊನಾ ಹಾಗೂ ಮಳೆಯಿಂದ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

Advertisement

2020-21 ಹಾಗೂ 2021-22ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಜೆಜೆಎಂ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಪೂರ್ಣಗೊಳ್ಳದಿರುವುದೇ ಹೆಚ್ಚು. 2024ರ ವೇಳೆಗೆ ಎಲ್ಲ ಮನೆಗೂ ಶುದ್ಧ ನೀರು ಪೂರೈಸುವ ಗುರಿ ಸಾಧನೆ ವಿಳಂಬವಾಗುವ ಸಾಧ್ಯತೆಯೂ ಇದೆ.

2020-2021ನೇ ಸಾಲಿಗೆ ಉಡುಪಿ ಜಿಲ್ಲೆಗೆ 339 ಕಾಮಗಾರಿ ಮಂಜೂರಾಗಿತ್ತು. 60 ಪೂರ್ಣಗೊಂಡಿದ್ದು, 247 ಪ್ರಗತಿಯಲ್ಲಿವೆ. 32 ಕಾಮಗಾರಿ ಇನ್ನು ಅರಂಭವಾಗಬೇಕಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೊಂದು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಇದೇ ಸಾಲಿನಲ್ಲಿ ದ.ಕ. ಜಿಲ್ಲೆಗೆ 458 ಕಾಮಗಾರಿ ಮಂಜೂರಾಗಿದ್ದು, 111 ಪೂರ್ಣಗೊಂಡಿವೆ. 343 ಪ್ರಗತಿಯಲ್ಲಿದ್ದು, 4 ಕಾಮಗಾರಿ ಆರಂಭವಾಗಬೇಕಿದೆ.

2021-22ನೇ ಸಾಲಿನಲ್ಲಿ ಉಡುಪಿಗೆ ಹಂಚಿಕೆಯಾಗಿರುವ 73 ಕಾಮಗಾರಿಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿ ಹಂತದಲ್ಲಿವೆ. ಒಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಇದರಲ್ಲಿ ಸೇರಿಸಲಾಗಿದ್ದು, ಅದು ಪ್ರಾಥಮಿಕ ಯೋಜನಾ ವರದಿ ತಯಾರಿ ಹಂತದಲ್ಲಿದೆ. ಈ ಸಾಲಿನಲ್ಲಿ ದ.ಕ. ಜಿಲ್ಲೆಗೆ 124 ಕಾಮಗಾರಿಗಳನ್ನು ಮಂಜೂರು ಮಾಡಿದ್ದು, ಎಲ್ಲವೂ ಡಿಪಿಆರ್‌ ಹಂತದಲ್ಲಿವೆ. 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಅದರಲ್ಲಿ 2ಕ್ಕೆ ಪ್ರಾಥಮಿಕ ಯೋಜನಾ ವರದಿಗಳನ್ನು ತಯಾರಿಸಿ, ಅನುಮೋದನೆ ನೀಡಲಾಗಿದೆ. ಉಳಿದ ಐದು ಯೋಜನೆಗಳ ಪ್ರಾಥಮಿಕ ಯೋಜನಾ ವರದಿ ತಯಾರಿ ಹಂತದಲ್ಲಿವೆ. ಉಡುಪಿ ಮತ್ತು ದ.ಕ. ಜಿಲ್ಲೆಗೆ ಒಟ್ಟು 639.22 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಳಂಬಕ್ಕೆ ಕಾರಣ :

Advertisement

ಜೆಜೆಎಂ ಕಾಮಗಾರಿ ಆರಂಭಿಸುವ ವೇಳೆ ಕೊರೊನಾ ಲಾಕ್‌ಡೌನ್‌ ಜಾರಿಯಾಗಿತ್ತು. ಇನ್ನು ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿ, ಕಾರ್ಯಾದೇಶ ಪಡೆದ ಕಾಮಗಾರಿಗಳನ್ನು ಅರಂಭಿಸುವಾಗ ಮಳೆ ಆರಂಭವಾಗಿತ್ತು. ಜಲಮೂಲ ತೆರೆದ ಬಾವಿ ಅಥವಾ ಕೊಳವೆ ಬಾವಿಯಾಗಿದ್ದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಫೆಬ್ರವರಿಯಿಂದ ಮೇ ವರೆಗೂ ಕಾಯಬೇಕಾಗಿತ್ತು. ಉಭಯ ಜಿಲ್ಲೆಗಳಲ್ಲಿ ಜನವಸತಿ ಪ್ರದೇಶಗಳು ಜಲಮೂಲದಿಂದ ದೂರ ಹಾಗೂ ಮನೆಗಳ ನಡುವೆ ಅಂತರ ಹೆಚ್ಚಿರುವುದರಿಂದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಜೆಜೆಎಂ ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿ ಸಿದ್ಧಪಡಿಸುವಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಸಭೆ ನಡೆಸಿ, ಅಗತ್ಯ ತರಬೇತಿ ನೀಡಿ ಬಗೆಹರಿಸಲಾಗಿದೆ.ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ

ಮೊದಲ ಹಂತದಲ್ಲಿ ಸುಮಾರು 12 ಸಾವಿರ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸಲು ಜೆಜೆಎಂ ಯೋಜನೆಯಡಿ ಕಾಮಗಾರಿ ಆರಂಭವಾಗಿದೆ. ಈ ವರ್ಷವೂ ಹೊಸ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ. –ಡಾ| ವೈ. ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

ಈಗ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದ್ದು, ಕಾಲಮಿತಿಯೊಳಗೆ ಗುರಿ ಸಾಧಿಸಲಿದ್ದೇವೆ. ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next