ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತೀವ್ರಗೊಳ್ಳುತ್ತಿದೆ. ಒಂದು ತಿಂಗಳ ಅವಧಿಯಲ್ಲಿ (ಏಪ್ರಿಲ್ -ಮೇ) ಬರೊಬ್ಬರಿ 19 ಜನರು ಸೋಂಕಿಗೆ ಬಲಿಯಾಗಿದ್ದರೆ, ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಹಳ್ಳಿ ಹಳ್ಳಿಯಲ್ಲೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಜಿಲ್ಲಾಡಳಿತ ಹಾಗೂ ಜನರು ಇನ್ನಷ್ಟು ಜಾಗೃತರಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ರಾಜ್ಯ ಸರ್ಕಾರ 14 ದಿನಗಳ ಕಾಲ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದೆ. ಜನರು ಮೊದಲೆರಡು ದಿನ ಕರ್ಫ್ಯೂ ಪಾಲಿಸಿ ಬಳಿಕ ಎಲ್ಲೆಂದರಲ್ಲಿ ನಿರಾತಂಕವಾಗಿ ಸುತ್ತಾಡುತ್ತಿದ್ದಾರೆ.
ಜನರು ಭಯವೇ ಇಲ್ಲದಂತೆ ವರ್ತಿಸುತ್ತಿದ್ದು, ಪೊಲೀಸ್ ಹಾಗೂ ಜಿಲ್ಲಾಡಳಿತದ ವೈಫಲ್ಯದಿಂದ ಹೀಗಾಗುತ್ತಿದೆ ಎಂದೆನ್ನುತ್ತಿದ್ದಾರೆ ಪ್ರಜ್ಞಾವಂತರು. ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿರುವುದರಿಂದ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದಲ್ಲರೂ ಗುಳೆ ಹೋಗಿದ್ದವರು ಏಪ್ರಿಲ್ ತಿಂಗಳಲ್ಲಿ ಊರುಗಳನ್ನು ಸೇರಿದ್ದಾರೆ.
ಗ್ರಾಮ ಮಟ್ಟದ ಸಮಿತಿ ಗುಳೆ ಹೋಗಿ ವಾಪಸ್ಸಾದವರ ಬಗ್ಗೆ ನಿಗಾ ಇಟ್ಟಿದೆ ಎಂದು ಮಾತಿಗೆ ಹೇಳುತ್ತಿದೆ. ಆದರೆ ಗುಳೆ ಹೋಗಿ ಬಂದವರ ಪ್ರಮಾಣ ಹೆಚ್ಚಾಗುತ್ತಿದ್ದು, ಸೋಂಕು ಸಹಿತ ವೇಗವಾಗಿಯೇ ಹರಡುತ್ತಿದೆ. ಆರೆ ಗುಳೆ ಹೋಗಿ ಬಂದ ಏಷ್ಟು ಜನರನ್ನು ಪರೀಕ್ಷೆ ಮಾಡಲಾಗಿದೆ? ಅವರ ವರದಿ ಸ್ಥಿತಿಗತಿಯೇನು ಎನ್ನುವ ಮಾಹಿತಿ ಹೊರ ಬಿಡುತ್ತಿಲ್ಲ.
ಏಪ್ರಿಲ್‌ನಿಂದ ಶನಿವಾರದವರೆಗೂ ಜಿಲ್ಲೆಯಲ್ಲಿ ಬರೊಬ್ಬರಿ 19 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಂದೆಡೆ ಜಿಲ್ಲಾಡಳಿತವು ನಮ್ಮಲ್ಲಿ ಬೆಡ್‌ಗಳಿಗೆ ಯಾವ ಸಮಸ್ಯೆಯಿಲ್ಲ. ಐಸಿಯು ಕೊಠಡಿಗಳ ವ್ಯವಸ್ಥೆಯೂ ಇದೆ. ಆಕ್ಸಿಜನ್, ವೆಂಟಿಲೇಟರ್ ಕೊರತೆ ಇಲ್ಲ ಎಂದೆನ್ನುತ್ತಿದೆ. ಇಷ್ಟಾದರೂ ಜನರ ಸಾವಿನ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾಟಾಚಾರಕ್ಕೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಜಾರಿ ಮಾಡುವುದನ್ನು ಬಿಟ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಶೀಘ್ರ ಎಚ್ಚರಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳುವುದರಲ್ಲಿ ಎರಡು ಮಾತಿಲ್ಲ.