Advertisement

ಜಗತ್ತಲ್ಲಿ ಕೋವಿಡ್ 2.0? ಚೀನ, ನ್ಯೂಜಿಲೆಂಡ್‌, ಅಮೆರಿಕದಲ್ಲಿ 2ನೇ ಹಂತದ ಸೋಂಕು ಶುರು !

09:06 AM Jun 17, 2020 | mahesh |

ಬೀಜಿಂಗ್‌: ಕೋವಿಡ್ ಮುಗೀತು. ಇನ್ನು ನೆಮ್ಮದಿ ಯಿಂದ ಇರಬಹುದು… ಹೀಗೆ ಸಮಾಧಾನಪಟ್ಟುಕೊಂಡಿದ್ದ ದೇಶಗಳೆಲ್ಲ ಮತ್ತೆ ಬೆಚ್ಚಿಬಿದ್ದಿವೆ. ಲಾಕ್‌ಡೌನ್‌ ತೆರವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದ ಹಲವು ದೇಶಗಳಿಗೆ ಸೋಂಕು ಮತ್ತೆ ವಕ್ಕರಿಸಿದ್ದು, ಈ ವೈರಸ್‌ ವಿರುದ್ಧ ಹೋರಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದನ್ನು ತೋರಿಸಿದೆ. ಚೀನ, ನ್ಯೂಜಿಲೆಂಡ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೋಂಕಿನ ಎರಡನೇ ಹಂತದ ವ್ಯಾಪಿಸುವಿಕೆ ಆರಂಭವಾಗಿದೆ. ಕಳೆದ ವರ್ಷ ಚೀನದ ವುಹಾನ್‌ನಲ್ಲಿ ಹುಟ್ಟಿ, ಅನಂತರ ಜಗದಗಲ ವ್ಯಾಪಿಸಿ 80 ಲಕ್ಷಕ್ಕೂ ಅಧಿಕ ಮಂದಿಗೆ ವ್ಯಾಪಿಸಿದ ಈ ಸೋಂಕು ಸದ್ಯಕ್ಕಂತೂ ದೂರವಾ­ಗುವ ಲಕ್ಷಣ ಗೋಚರಿಸುತ್ತಿಲ್ಲ. ಚೀನದಲ್ಲಿ ಸೋಂಕಿತರು ಗುಣ­ಮುಖ­ರಾಗುತ್ತಿದ್ದಂತೆ, ಇತ್ತೀಚೆಗೆ ಎಲ್ಲ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಏಕಾಏಕಿ ಬೀಜಿಂಗ್‌ನ ಮಾರುಕಟ್ಟೆಯೊಂದರಲ್ಲಿ ಮತ್ತೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು, ಮತ್ತೂಂದು ಸುತ್ತಿನ ಪ್ರತಾಪ ಆರಂಭಿಸಿದೆ.

Advertisement

106 ಮಂದಿಗೆ ಸೋಂಕು: ಮಂಗಳವಾರ ಬೀಜಿಂಗ್‌ನಲ್ಲಿ 106 ಮಂದಿಗೆ ಸೋಂಕು ದೃಢಪಟ್ಟಿದೆ. ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅಪಾಯದ ಮುನ್ಸೂಚನೆಯಿದು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಸೋಂಕಿನ ವ್ಯಾಪಿಸು ವಿಕೆಗೆ ಕಡಿವಾಣ ಹಾಕಲು ಚೀನ ಮತ್ತೂಮ್ಮೆ ಹೆಜ್ಜೆಯಿಟ್ಟಿದ್ದು, ವೈರಸ್‌ ಕಾಣಿಸಿಕೊಂಡಿರುವ ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿದೆ.

ಅಮೆರಿಕ, ಯುರೋಪ್‌ನಲ್ಲೂ ಸೆಕೆಂಡ್‌ ವೇವ್‌
ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸ­ಲಾ­ಗಿದ್ದ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಮತ್ತೂಂದು ಸುತ್ತಿನ ವ್ಯಾಪಿಸುವಿಕೆ ಶುರುವಾಗಿದೆ. ಆದರೆ, ಸೆಕೆಂಡ್‌ ವೇವ್‌ ಆರಂಭವಾದರೂ ಶಟ್‌ಡೌನ್‌ ಮಾಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಐರೋಪ್ಯ ದೇಶಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ­ದ್ದರೂ, ಇಲ್ಲೂ ಸೋಂಕು ನಿರ್ಮೂಲನೆ­ಯಾಗಿಲ್ಲ. ಬೆಲ್ಜಿಯಂ, ಫ್ರಾನ್ಸ್‌, ಜರ್ಮನಿ, ಗ್ರೀಸ್‌, ಸ್ಪೇನ್‌ಗಳು ಗಡಿ ನಿರ್ಬಂಧಗಳನ್ನು ತೆರವುಗೊಳಿಸಿ, ಪ್ರವಾಸೋ­ದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂದಾಗಿರುವುದು ಅಪಾಯದ ಮುನ್ಸೂಚನೆ ನೀಡಿದೆ. ಇಟಲಿಯಲ್ಲೂ ಎರಡನೇ ಹಂತದ ವ್ಯಾಪಿಸುವಿಕೆಯ ಭಯ ಶುರುವಾಗಿದೆ. ರೋಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ‌ಲ್ಲಿ 17 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಡೀ ಅಪಾರ್ಟ್‌ಮೆಂಟ್‌ ಅನ್ನು ಸೀಲ್‌ಡೌನ್‌ ಮಾಡಲಾಗಿದೆ. ಒಟ್ಟಿನಲ್ಲಿ ಹೊಸ ಲಸಿಕೆ ಅಭಿವೃದ್ಧಿ­ಪಡಿ­ಸುವವರೆಗೂ ಸೋಂಕಿನ ಮರುಕಳಿಸುವಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

24 ಗಂಟೆಗಳಲ್ಲಿ 10,667 ಪ್ರಕರಣ
ದೇಶದಲ್ಲಿ ಸತತ 5ನೇ ದಿನವೂ ದೈನಂದಿನ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ 380 ಮಂದಿ ಸೋಂಕಿಗೆ ಬಲಿಯಾಗಿದ್ದು, 10,667 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನೊಂದೆಡೆ, ಗುಣಮುಖ ಪ್ರಮಾಣ ಶೇ.52.46ಕ್ಕೇ­ರಿದ್ದು, 1.80 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ, ದೇಶದಲ್ಲಿ ಸಾವಿನ ಸಂಖ್ಯೆ 10 ಸಾವಿರದ ಸಮೀಪಕ್ಕೆ ಬಂದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಕಂಡ ದೇಶಗಳ ಪೈಕಿ ಭಾರತ 8ನೇ ಸ್ಥಾನದಲ್ಲಿದೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿವಿ ಹೇಳಿದೆ.

ನ್ಯೂಜಿಲೆಂಡ್‌ ಈಗ ಕೋವಿಡ್ ಮುಕ್ತವಲ್ಲ
ಕಳೆದ ವಾರವಷ್ಟೇ ಕೊರೊನಾ ಮುಕ್ತ ಎಂದು ಘೋಷಿಸಿಕೊಂಡು ಸಂಭ್ರಮಪಟ್ಟಿದ್ದ ನ್ಯೂಜಿಲೆಂಡ್‌ನ‌ಲ್ಲಿ ಮತ್ತೆ ಆತಂಕ ಮನೆಮಾಡಿದೆ. ಒಂದು ತಿಂಗಳ ಬಳಿಕ ಮಂಗಳವಾರ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಬ್ರಿಟನ್‌ನಿಂದ ಆಗಮಿಸಿದ್ದ ಇಬ್ಬರಿಗೆ ಸೋಂಕು ದೃಢವಾಗಿದ್ದು, ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ಪೂರ್ಣ ಪ್ರಮಾಣದಲ್ಲಿ ವೈರಸ್‌ ಮತ್ತೂಮ್ಮೆ ವ್ಯಾಪಿಸಲಿದೆಯೇ ಎಂಬ ಭೀತಿ ಮನೆ ಮಾಡಿದೆ. ಇದೇ ವೇಳೆ, ದಕ್ಷಿಣ ಕೊರಿಯಾದಲ್ಲೂ ಹೊಸದಾಗಿ ಕೊರೊನಾ ಕ್ಲಸ್ಟರ್‌ ಪ್ರತ್ಯಕ್ಷವಾಗಿರುವ ಕಾರಣ, ಇತ್ತೀಚೆಗಷ್ಟೇ ಪುನಾರಂಭಗೊಂಡಿದ್ದ 200ಕ್ಕೂ ಹೆಚ್ಚು ಶಾಲೆಗಳನ್ನು ಮತ್ತೆ ಮುಚ್ಚಲು ಆದೇಶಿಸಲಾಗಿದೆ.

Advertisement

ಜುಲೈನಲ್ಲಿ 8 ಲಕ್ಷ?
ಭಾರತದಲ್ಲಿ ಸೋಂಕು ವ್ಯಾಪಿಸುತ್ತಿರುವ ವೇಗ ನೋಡಿದರೆ ಜುಲೈ 15ರ ವೇಳೆಗೆ ಸೋಂಕಿತರ ಸಂಖ್ಯೆ 8 ಲಕ್ಷಕ್ಕೇರುವ ಸಾಧ್ಯತೆಯಿದೆ ಎಂದು ಮಿಚಿಗನ್‌ ವಿವಿಯ ದತ್ತಾಂಶ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಜತೆಗೆ, ಸದ್ಯಕ್ಕಂತೂ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆಯಿಲ್ಲ. ಉತ್ತುಂಗಕ್ಕೇ­ರುವ ಅವಧಿಯು ಮತ್ತಷ್ಟು ಮುಂದೂಡಿಕೆ­ಯಾಗಲಿದೆ ಎಂದು ವಿವಿಯ ಪ್ರೊಫೆಸರ್‌ ಭ್ರಮರ್‌ ಮುಖರ್ಜಿ ಹೇಳಿದ್ದಾರೆ. ಭಾರತವು ಆರಂಭದಲ್ಲೇ ಅಂದರೆ ಮಾರ್ಚ್‌ ತಿಂಗಳಲ್ಲೇ ಲಾಕ್‌ಡೌನ್‌ ಘೋಷಿಸಿದ ಕಾರಣ ಸ್ವಲ್ಪಮಟ್ಟಿಗೆ ವೈರಸ್‌ ವ್ಯಾಪಿಸುವಿಕೆಗೆ ಕಡಿವಾಣ ಬಿದ್ದಿದೆ. ಆದರೆ, ಅದಕ್ಕೆ ವ್ಯಾಪಿಸುವಿಕೆಯನ್ನು ಸಂಪೂರ್ಣ­ವಾಗಿ ತಡೆಯಲು ಸಾಧ್ಯವಾಗಿಲ್ಲ ಎಂದೂ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next