Advertisement

ಚೀನ ವಿರುದ್ಧ ಅಮೆರಿಕದಲ್ಲಿ 20 ಲಕ್ಷ ಕೋಟಿ ಡಾಲರ್‌ನ ದಾವೆ

11:15 AM Mar 27, 2020 | Hari Prasad |

ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನ ನಡುವಿನ ಸಮರ ಮುಂದುವರಿದಿದೆ. ಈ ವೈರಸ್‌ನ ಮೂಲ ಯಾವುದು ಎಂಬ ಬಗ್ಗೆ ಅನೇಕ ಥಿಯರಿಗಳು ಹುಟ್ಟಿಕೊಂಡಿರುವಂತೆಯೇ, ಅಮೆರಿಕದ ನ್ಯಾಯವಾದಿ ಅದು ಚೀನದ ಅಧಿಕಾರಿಗಳು ಅಭಿವೃದ್ಧಿ ಪಡಿಸಿದ ಜೈವಿಕ ಅಸ್ತ್ರ ಎಂದು ಆರೋಪಿಸಿ, ಚೀನದ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡಿದ್ದಾರೆ.

Advertisement

ವಕೀಲ ಲ್ಯಾರಿ ಕ್ಲೇಮನ್‌ ಹಾಗೂ ಅವರ ಫ್ರೀಡಮ್‌ ವಾಚ್‌ ಸಂಸ್ಥೆ, ಟೆಕ್ಸಾಸ್‌ ನ ಬಝ್ ಫೋಟೋಸ್‌ ಎಂಬ ಕಂಪೆನಿಯ ಜತೆಗೂಡಿ ಈ ಮೊಕದ್ದಮೆ ಹೂಡಿದ್ದಾರೆ. ಚೀನ ಸರಕಾರ, ಚೀನ ಸೇನೆ, ವುಹಾನ್‌ ಇನ್‌ ಸ್ಟಿಟ್ಯೂಟ್‌ ಆಫ್ ವೈರಾಲಜಿ, ಅದರ ನಿರ್ದೇಶಕ ಶಿ ಝೆಂಗ್ಲಿ, ಚೀನ ಸೇನೆಯ ಮೇ.ಜ. ಚೆನ್‌ ವೈ ವಿರುದ್ಧ 20 ಲಕ್ಷಕೋಟಿ ಡಾಲರ್‌ ದಾವೆ ಹೂಡಲಾಗಿದೆ. ಈ ಮೊತ್ತವು ಚೀನದ ಜಿಡಿಪಿಗಿಂತಲೂ (ಒಟ್ಟು ದೇಶೀಯ ಉತ್ಪನ್ನ) ಹೆಚ್ಚಿನದ್ದಾಗಿದೆ.

ಸಾವಿರಾರು ಮಂದಿಯ ಸಾವಿಗೆ ಪ್ರಚೋದನೆ, ಭಯೋತ್ಪಾದಕರಿಗೆ ನೆರವು, ಅಮೆರಿಕದ ನಾಗರಿಕರ ಸಾವು ಹಾಗೂ ನಷ್ಟವನ್ನುಂಟು ಮಾಡುವ ಸಂಚು, ನಿರ್ಲಕ್ಷ್ಯ, ಹಲ್ಲೆ ಸಹಿತ ಹಲವು ಆರೋಪಗಳನ್ನು ಚೀನ ಮೇಲೆ ಹೊರಿಸಲಾಗಿದೆ. ವೈರಸ್‌ ಅನ್ನು ವುಹಾನ್‌ ವೈರಾಲಜಿ ಸಂಸ್ಥೆಯಿಂದಲೇ ಬಿಡುಗಡೆ ಮಾಡಲಾಗಿದೆ. ಜನಸಮೂಹವನ್ನು ಕೊಲ್ಲಲೆಂದೇ ಚೀನ ಇಂಥ ವೈರಸ್‌ ಅಭಿವೃದ್ಧಿಪಡಿಸಿದೆ ಎಂದೂ ಆರೋಪಿಸಲಾಗಿದೆ.

ಅಲ್ಲದೆ ಕೋವಿಡ್ 19 ವೈರಸ್ ಕುರಿತು ಹೊರಜಗತ್ತಿಗೆ ಮಾಹಿತಿ ನೀಡಿದ ಚೀನದ ವೈದ್ಯರು ಮತ್ತು ಸಂಶೋಧಕರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಮೇ.ಜ. ಚೆನ್‌ ಅವರು ತಮ್ಮನ್ನು ತಾವು ವೈರಸ್‌ನಿಂದ ರಕ್ಷಿಸಿಕೊಳ್ಳುವ ಸಲುವಾಗಿ, ಇನ್ನೂ ಪರೀಕ್ಷೆಯನ್ನೇ ನಡೆಸದಂಥ ಲಸಿಕೆಯನ್ನು ತಮಗೆ ಮತ್ತು ತಮ್ಮ ತಂಡದ 6 ಸದಸ್ಯರಿಗೆ ಇಂಜೆಕ್ಟ್ ಮಾಡಿ ಕೊಂಡಿದ್ದಾರೆ. ಈ ಎಲ್ಲ ಆರೋಪಿಗಳೂ ಒಟ್ಟಿಗೇ ಸೇರಿ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಂಚು ರೂಪಿಸಿದ್ದಾರೆ. ಶತ್ರುರಾಷ್ಟ್ರಗಳ ಜನಸಮೂಹಕ್ಕೆ ಈ ವೈರಸ್‌ ಬಿಟ್ಟಿದೆ ಎಂದೂ ಲ್ಯಾರಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next