Advertisement

ದೇಶದ ಏರ್ ಪೋರ್ಟ್ ಗಳಲ್ಲಿ ನಿಗಾ ವಹಿಸುವಲ್ಲಿ ಆಗಿತ್ತೇ ಲೋಪ?

09:34 AM Mar 29, 2020 | Hari Prasad |

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ 800ರ ಸಮೀಪಕ್ಕೆ ಬಂದಿರುವಂತೆಯೇ, ಕಳೆದೆರಡು ತಿಂಗಳಲ್ಲಿ ದೇಶದೊಳಕ್ಕೆ ಆಗಮಿಸಿದ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್‌ ಗೆ ಒಳಪಡಿಸಿರುವುದು ನಿಜವೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ, ಸ್ವತಃ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ರಾಜ್ಯಗಳಿಗೆ ಬರೆದಿರುವ ಪತ್ರ.

Advertisement

ಎರಡು ತಿಂಗಳಲ್ಲಿ 15 ಲಕ್ಷಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದಾರೆ. ಆದರೆ, ದೇಶದೊಳಕ್ಕೆ ಬಂದವರ ಒಟ್ಟಾರೆ ಸಂಖ್ಯೆ ಹಾಗೂ ಕೊರೊನಾ ನಿಗಾಗೆ ಒಳಗಾದವರ ಸಂಖ್ಯೆಯಲ್ಲಿ ಭಾರೀ ಅಂತರವಿರುವಂತೆ ಗೋಚರಿಸುತ್ತಿದೆ ಎಂದು ರಾಜೀವ್‌ ಗೌಬಾ ಶುಕ್ರವಾರ ಹೇಳಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಅವರು ಈ ಕಳವಳ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ವಹಿಸುವಲ್ಲಿ ಆಗಿರುವ ನಿರ್ಲಕ್ಷ್ಯವು ದೇಶದಲ್ಲಿ ಕೋವಿಡ್ 19 ವೈರಸ್ ವ್ಯಾಪಿಸುವಿಕೆಯನ್ನು ತಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳಿಗೂ ತಣ್ಣೀರು ಸುರಿಸುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ಈವರೆಗೆ ಕೋವಿಡ್ 19 ವೈರಸ್ ದೃಢಪಟ್ಟ ವ್ಯಕ್ತಿಗಳೆಲ್ಲರೂ ವಿದೇಶಗಳಿಂದ ವಾಪಸ್‌ ಬಂದಿರುವ ಹಿನ್ನೆಲೆ ಹೊಂದಿರುವವರು. ಜನವರಿ 18ರಿಂದ ಮಾರ್ಚ್‌ 23ರವರೆಗೆ 15 ಲಕ್ಷ ಮಂದಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ವಲಸೆ ಸಂಸ್ಥೆಯೇ ಮಾಹಿತಿ ನೀಡಿದೆ.

ದೇಶದಲ್ಲಿ ಕೋವಿಡ್ 19 ವೈರಸ್ ವ್ಯಾಪಿಸುವುದನ್ನು ತಡೆಯಬೇಕಿದ್ದರೆ, ಅವರೆಲ್ಲರನ್ನೂ ತೀವ್ರ ನಿಗಾದಲ್ಲಿರಿಸಲೇಬೇಕಿತ್ತು. ಇನ್ನಾದರೂ ಇಂಥ ಕ್ರಮ ಕಟ್ಟುನಿಟ್ಟಾಗಿ ಆಗುವಂತೆ ನೋಡಿಕೊಳ್ಳಿ ಎಂದೂ ರಾಜೀವ್‌ ಗೌಬಾ ಅವರು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next