Advertisement
ಹೊಸದಿಲ್ಲಿ: ಭಾರತದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಸುಮಾರು ಅರ್ಧದಷ್ಟು ಪ್ರಕರಣಗಳು ಪತ್ತೆಯಾಗಿದ್ದು 4ನೇ ಹಂತದ ಲಾಕ್‌ಡೌನ್‌ನಲ್ಲಿ!
Related Articles
Advertisement
ಅಂದರೆ, 4ನೇ ಹಂತದಲ್ಲಿ ಸೋಂಕು ಅತ್ಯಂತ ತೀವ್ರತರವಾಗಿ ವ್ಯಾಪಿಸಿದ್ದು, ಅದರ ತೀವ್ರತೆ ಈಗಲೂ ಮುಂದುವರಿದಿದೆ. ಜತೆಗೆ, ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಬಾಧಿತ ದೇಶಗಳ ಪೈಕಿ ಭಾರತವು 9ನೇ ಸ್ಥಾನಕ್ಕೆ ತಲುಪಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ಲಾಕ್‌ಡೌನ್ ಸಡಿಲಿಕೆ ಮಾಡಿದ್ದೇ ಮುಳುವಾಯಿತೇ ಎಂಬ ಪ್ರಶ್ನೆಗಳೂ ಮೂಡತೊಡಗಿವೆ.
5,78,816 ಶಂಕಿತರ ಮಾಹಿತಿ ಕೊರತೆ: ಭಾರತದಲ್ಲಿ ಕೋವಿಡ್ ಪರೀಕ್ಷಾ ದತ್ತಾಂಶ ಪಟ್ಟಿಯಲ್ಲಿ ಯಾವುದೇ ಶ್ರೇಣಿಗೆ ಒಳಪಡದ ಶಂಕಿತರ ಸಂಖ್ಯೆಯೇ ಅಧಿಕವಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದರೆ, ಸಾಮಾನ್ಯವಾಗಿ ರೋಗಿಗಳನ್ನು ದಾಖಲಿಸಿಕೊಳ್ಳುವಾಗ 7 ಶ್ರೇಣಿಗಳಲ್ಲಿ ಒಂದು ಶ್ರೇಣಿಗೆ ಸೇರಿಸಲಾಗುತ್ತದೆ. ಜ.22ರಿಂದ ಎ.30ರವರೆಗೆ ಭಾರತದಲ್ಲಿ ಒಟ್ಟು 10,21,518 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ಅವುಗಳನ್ನು ಕ್ರಮವಾಗಿ, ವಿದೇಶದಿಂದ ಬಂದ ಸೋಂಕಿತರು, ಕೋವಿಡ್ ಸೋಂಕಿತರ ಸಂಪರ್ಕಿತರು, ಸೋಂಕಿತ ಆರೋಗ್ಯ ಸಿಬಂದಿ, ಆಸ್ಪತ್ರೆಗೆ ಸ್ವಯಂ ದಾಖಲಾದವರು, ಯಾವುದೇ ಲಕ್ಷಣ ಹೊಂದದ ಸೋಂಕಿತರು, ಲಕ್ಷಣರಹಿತ ಸೋಂಕಿತ ಆರೋಗ್ಯ ಸಿಬಂದಿ, ಹಾಟ್ ಝೋನ್ ಪ್ರಕರಣಗಳು- ಹೀಗೆ 7 ವಿಭಾಗಗಳಲ್ಲಿ ಒಂದಕ್ಕೆ ಶಂಕಿತರನ್ನು ವರ್ಗೀಕರಿಸಲಾಗಿದೆ.
‘ಸೋಂಕಿತರ ಜಾಡು ಪತ್ತೆಗೆ ದತ್ತಾಂಶಗಳು ಸಹಕಾರಿ. ಆದರೆ ರೋಗ ಹೇಗೆ ಹರಡುತ್ತಿದೆ ಎಂದು ನೋಡಲು ಮಾಹಿತಿಗಳ ಕೊರತೆ ಎದುರಾಗಿದೆ. ಪರೀಕ್ಷೆ ವೇಳೆ ರೋಗಿಯ ವಿವರ ಸರಿಯಾಗಿ ದಾಖಲಿಸಿಕೊಳ್ಳದೆ ಹೀಗಾಗಿರಬಹುದು’ ಎಂದು ಐಸಿಎಂಆರ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡಾ| ತರುಣ್ ಭಟ್ನಾಗರ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಸಾಮುದಾಯಿಕ ವ್ಯಾಪಿಸುವಿಕೆ ಸ್ಪಷ್ಟ:ಪ್ರಸ್ತುತ ಸನ್ನಿವೇಶದಲ್ಲಿ ಕೋವಿಡ್ ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ನಿರೀಕ್ಷಿಸುವುದೇ ಅವಾಸ್ತವಿಕ. ಅಷ್ಟೇ ಅಲ್ಲ, ದೇಶಾದ್ಯಂತ ಈಗಾಗಲೇ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿ ಆಗಿದೆ!
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್, ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಸೋಶಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೋಶನ್ ಆಫ್ ಎಪಿಡೆಮಿಯಾ ಲಜಿಸ್ಟ್ ರವಿವಾರ ಬಿಡುಗಡೆ ಮಾಡಿರುವ ಜಂಟಿ ಪ್ರಕಟನೆಯಲ್ಲಿ ಈ ವಿಚಾರ ಬಹಿರಂಗಪಡಿಸಲಾಗಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಇನ್ನೂ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿದೆ ಎಂಬುದನ್ನು ಒಪ್ಪಿಕೊಂಡಿಲ್ಲ. ಭಾರತದಲ್ಲಿ ಮಾ.25ರಿಂದ ಮೇ 30ರವರೆಗೆ ಅತ್ಯಂತ ಕಠಿನವಾದ ರಾಷ್ಟ್ರವ್ಯಾಪಿ ನಿರ್ಬಂಧ ಹೇರಲಾಗಿತ್ತು. ಆದರೂ, ಕೋವಿಡ್ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಹೆಚ್ಚಳವಾಗಿದೆ. ಈಗ ದೇಶವು ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ಕಾಲಿಟ್ಟಾಗಿದೆ ಎಂದು ಈ ಪ್ರಮುಖ ತಜ್ಞರು ಹೇಳಿದ್ದಾರೆ. ಜತೆಗೆ, ಸರಕಾರವು ಕೆಲವೊಂದು ನಿಯಮಗಳನ್ನು ಜಾರಿ ಮಾಡುವ ಮುನ್ನ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರನ್ನು ಸಂಪರ್ಕಿಸಿ, ಅವರೊಂದಿಗೆ ಸಮಾಲೋಚನೆ ನಡೆಸದೆ ತಪ್ಪು ಮಾಡಿತು ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ರೋಗ ನಿರೋಧಕ ಅಪಾಯಕಾರಿ
ಯಾವುದೇ ದೇಶ, ತನ್ನ ಇಡೀ ಜನ ಸಮುದಾಯವನ್ನು ಕೋವಿಡ್ ವಿರುದ್ಧ ಸಜ್ಜುಗೊಳಿಸುವ ಉದ್ದೇಶದಿಂದ, ತನ್ನೆಲ್ಲಾ ಪ್ರಜೆಗಳಿಗೆ ವಿಶೇಷವಾದ ರೋಗ ನಿರೋಧಕ ವ್ಯವಸ್ಥೆಯನ್ನು ಜಾರಿಗೊಳಿಸುವ ಆಲೋಚನೆ ಅಪಾಯಕಾರಿ ಎಂದು ‘ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಕೌನ್ಸಿಲ್’ನ ಮಹಾ ನಿರ್ದೇಶಕ (ಸಿ.ಎಸ್.ಐ.ಆರ್.) ಶೇಖರ್ ಮಾಂಡೆ ತಿಳಿಸಿದ್ದಾರೆ. ‘ದೇಶದ ಜನ ಸಂಖ್ಯೆಯಲ್ಲಿ ಶೇ. 60-70ರಷ್ಟು ಜನರು ಕೋವಿಡ್ ನಂತಹ ರೋಗಗಳಿಂದ ಬಾಧಿತರಾದರೆ, ಆಗ ಸಾಮೂಹಿಕ ರೋಗ ನಿರೋಧಕ ಲಸಿಕೆಗಳನ್ನು ಉಪಯೋಗಿಸುವುದು ಅನಿವಾರ್ಯವಾಗುತ್ತದೆ. ಆದರೆ, ಸದ್ಯದ ಕೋವಿಡ್ ಪರಿಸ್ಥಿತಿ ಆ ಮಟ್ಟಕ್ಕೆ ತಲುಪಿಲ್ಲ. ಅವು ರೋಗ ನಿರೋಧಕ ಶಕ್ತಿ ಇಲ್ಲದಿರುವ ವ್ಯಕ್ತಿಗಳನ್ನು ಮಾತ್ರ ಆವರಿಸಿಕೊಳ್ಳುತ್ತಿದೆ. ಇನ್ನು, ಕೋವಿಡ್ ನ ಎರಡನೇ ಅಲೆ ಎದ್ದು ಅದು ತಾರಕಕ್ಕೇರಿದ ನಂತರ ಈ ಸೋಂಕು ಗಣನೀಯವಾಗಿ ತಗ್ಗುತ್ತದೆ. ಹಾಗಾಗಿ, ಸಾಮೂಹಿಕ ರೋಗ ನಿರೋಧಕ ಲಸಿಕೆಯಂಥ ಆಲೋಚನೆಗಳು ಬೇಡ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಟ್‌ಸ್ಪಾಟ್‌ಗಳಲ್ಲಿ ಭಾರತಕ್ಕೆ 7ನೇ ಸ್ಥಾನ
ಸೋಂಕಿತರ ಸಂಖ್ಯೆ 1.89 ಲಕ್ಷ ದಾಟುತ್ತಿದ್ದಂತೆಯೇ, ಭಾರತವು ಜರ್ಮನಿಯನ್ನು ಹಿಂದಿಕ್ಕಿ ಜಗತ್ತಿನ 10 ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತಲುಪಿದೆ. ಈವರೆಗೆ 8ನೇ ಸ್ಥಾನದಲ್ಲಿದ್ದ ಜರ್ಮನಿಯಲ್ಲಿ ಒಟ್ಟಾರೆ 1.83 ಲಕ್ಷಕ್ಕಿಂತ ಅಧಿಕ ಸೋಂಕಿತರಿದ್ದಾರೆ. ಕೇವಲ 2 ದಿನಗಳ ಅವಧಿಯಲ್ಲಿ ಭಾರತವು 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ. ಪ್ರಸ್ತುತ 10 ಹಾಟ್‌ಸ್ಪಾಟ್ ದೇಶಗಳ ಪೈಕಿ 18 ಲಕ್ಷಕ್ಕಿಂತ ಹೆಚ್ಚು ಸೋಂಕಿತರಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಸ್ಪೇನ್, ಯು.ಕೆ., ಇಟಲಿ ಮತ್ತು ಫ್ರಾನ್ಸ್ ಇದೆ. 8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು
4ನೇ ಹಂತದ ಲಾಕ್ ಡೌನ್ ಮುಗಿದ 5ನೇ ಹಂತಕ್ಕೆ ಕಾಲಿಡುತ್ತಿರುವಂತೆಯೇ ಆತಂಕಕಾರಿ ಬೆಳವಣಿಗೆಯೆಂಬಂತೆ, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಬರೋಬ್ಬರಿ 8,380 ಮಂದಿಗೆ ಸೋಂಕು ತಗುಲಿದೆ. ಶನಿವಾರ ಬೆಳಗ್ಗೆ 8ರಿಂದ ಭಾನುವಾರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಅವಧಿಯಲ್ಲಿ 193 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1.82 ಲಕ್ಷ ದಾಟಿದಂತಾಗಿದೆ. ಇದೇ ವೇಳೆ, 86,983 ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.47.75ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ 193 ಸಾವುಗಳಿಗೆ ದೇಶ ಸಾಕ್ಷಿಯಾಗಿದೆ.