ಕೋವಿಡ್ ವೈರಸ್ ಹತ್ತಿಕ್ಕಲು ವಿಶ್ವಸಂಸ್ಥೆ ಜತೆ ನಲವತ್ತು ರಾಷ್ಟ್ರಗಳು ಒಟ್ಟಾಗಿ ಕೈ ಜೋಡಿಸಲು ನಿರ್ಧರಿಸಿವೆ.
ವಿಶ್ವಸಂಸ್ಥೆ ರಣಕಹಳೆ ಊದಿದ್ದು ಒಟ್ಟಾರೆ 60 ಸಾವಿರ ಕೋಟಿ ರೂ. ಸಂಗ್ರಹಕ್ಕೆ 40 ರಾಷ್ಟ್ರಗಳು ಇದೀಗ ಪಣತೊಟ್ಟಿವೆ, ಸಂಶೋಧನೆ ಹಾಗೂ ಔಷಧಿಗಳ ಅಭಿವೃದ್ಧಿಪಡಿಸಲು ಸಾಕಷ್ಟು ಖರ್ಚು ಇದೆ.
ಇಂತಹ ಸಮಯದಲ್ಲಿ ಪರಸ್ಪರ ಹಣಕಾಸಿನ ನೆರವು ಅಗತ್ಯ ಎನ್ನುವುದನ್ನು ಯುರೋಪ್ ಕಮಿಷನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ 40 ರಾಷ್ಟ್ರಗಳ ನಾಯಕರು ಅಭಿಪ್ರಾಯಪಟ್ಟರು.
ಆ್ಯಕ್ಟ್ ಆ್ಯಕ್ಸಿಲರೇಟರ್ (ಕೋವಿಡ್ ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯೆ ವೇಗ ವರ್ಧಿಸುವ ಉದ್ದೇಶದಿಂದ ರಚಿಸಲಾದ ಜಾಗತಿಕ ಸಹಭಾಗಿತ್ವ) ಮೂಲಕ 40 ರಾಷ್ಟ್ರದ ನಾಯಕರು ಕೋವಿಡ್ ಸೋಂಕಿಗೆ ನಿಯಂತ್ರಣ ಹೇರುವ ತೀರ್ಮಾನ ಮಾಡಿದ್ದಾರೆ.
ಎಲ್ಲರೂ ಸುರಕ್ಷಿತರಾಗುವ ತನಕ ಯಾರೂ ಸುರಕ್ಷಿತರಲ್ಲ ಎಂದು ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಹೇಳಿದ ಬೆನ್ನಲ್ಲೇ ಇಂತಹದೊಂದು ನಿರ್ಣಯ ಹೊರಬಿದ್ದಿದೆ.