ಬಾಗಲಕೋಟೆ : ನಗರದ ಕಿರಾಣಿ ಅಂಗಡಿ ವರ್ತಕ, ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ವೃದ್ಧನ ಕುಟುಂಬಕ್ಕೆ ಈ ಸೋಂಕು ತಗುಲುವುದಕ್ಕೆ ಕಲಬುರಗಿಯ ನಂಟು ಇರುವ ಸಂಶಯವಿದ್ದು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ಧ ಈ ಸೋಂಕಿಗೆ ಬಲಿಯಾಗಿದ್ದಾನೆ. ಆತನ ಸಹೋದರ ಮತ್ತು ಪತ್ನಿಗೂ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಗರಕ್ಕೆ ಈ ಸೋಂಕು ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸದ್ಯದ ಪ್ರಾಥಮಿಕ ಮಾಹಿತಿ ಪ್ರಕಾರ, ಕಲಬುರಗಿಯಿಂದ ಈ ಸೋಂಕು ಬಂದಿರುವ ಸಾಧ್ಯತೆ ಇದೆ ಎಂದರು.
ಮೃತ ವೃದ್ಧನ ಸಹೋದರ ಮಾ. 15ರಂದು ರೈಲ್ವೆ ಮೂಲಕ ಕಲಬುರಗಿಗೆ ಹೋಗಿದ್ದ. ಅಲ್ಲಿನ ಮೊಮಿನಪುರ, ಗಂಜ್ ಪ್ರದೇಶದಲ್ಲಿ (ಕಲಬುರಗಿಯಲ್ಲಿ ಸೋಂಕಿನಿಂದ ಮೃತಪಟ್ಟವನ ಪ್ರದೇಶ ಇದಾಗಿತ್ತು) ಆತನ ಸ್ನೇಹಿತರೊಂದಿಗೆ ತಿರುಗಾಡಿದ್ದ. ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿಯ ಏರಿಯಾದ ಮನೆಯ ಬಳಿಯೂ ಬಾಗಲಕೋಟೆಯ ವೃದ್ಧನ ಸಹೋದರ ತಿರುಗಾಡಿದ ಕುರಿತು ಪ್ರಾಥಮಿಕ ಮಾಹಿತಿ ಇದೆ.
ಅಲ್ಲದೇ ಕಲಬುರಗಿಯಲ್ಲಿನ ಅವರ ಸಂಬಂಧಿಕರ ಮನೆ, ಹೊಟೇಲ್‌ನಲ್ಲಿ ಊಟವೂ ಮಾಡಿದ್ದಾರೆ. ಬಳಿಕ ಮಾ. 16ರಂದು ಬಸ್ ಮೂಲಕ ವಿಜಯಪುರಕ್ಕೆ ಬಂದು, ಅಲ್ಲಿಂದ ರಾತ್ರಿ 10.30ಕ್ಕೆ ಬಾಗಲಕೋಟೆಗೆ ಬಂದಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ವೃದ್ಧನ ಸಹೋದರನಿಗೆ ಕಲಬುರಗಿಯಿಂದಲೇ ಈ ಸೋಂಕು ಬಂದಿರುವ ಸಾಧ್ಯತೆ ಇದೆ. ವೃದ್ಧನಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಅತಿಬೇಗ ಈ ಸೋಂಕು ಕಾಣಿಸಿಕೊಂಡಿದ್ದು, ತಪಾಸಣೆ ಮಾಡಿದ ಬಳಿಕ ಸಹೋದರ ಮತ್ತು ವೃದ್ಧನ ಪತ್ನಿಗೂ ಪಾಜಿಟಿವ್ ಎಂದು ಬಂದಿದೆ. ಈ ಕುರಿತು ಕೂಲಂಕುಶ ಪರಿಶೀಲನೆ ನಡೆಯುತ್ತಿದೆ ಎಂದು ಕಾರಜೋಳ ಹೇಳಿದರು.