ಮೈಸೂರು: ಲಾಕ್‌ಡೌನ್ ಪರಿಣಾಮ ಹೋಟೆಲ್ ಉದ್ಯಮಕ್ಕೆ ನಷ್ಟ ಎದುರಾಗಿರುವ ಬೆನ್ನಲ್ಲೆ ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಸ್ಥಗಿತವಾಗಿದೆ. ಇದರಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್ ಮಾಲೀಕ ಜೈರಾಜ್ ಮಾತನಾಡಿ, ಕೋವಿಡ್ 19ದಿಂದ ಹೋಟೆಲ್‌ಗೆ ಹೊಡೆತ ಬಿದ್ದಿದೆ.
ಇದರಿಂದ ಸದ್ಯಕ್ಕೆ ಚೇತರಿಸಿ ಕೊಳ್ಳುವುದು ಕಷ್ಟ. ಅಲ್ಲದೆ, ಸರ್ಕಾರ ನಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೋಟೆಲ್ ನಡೆಸಿದರೂ ಸಾಕಷ್ಟು ನಿಬಂಧನೆಗಳು, ಅಪ್ರಸ್ತುತ ಮಾರ್ಗಸೂಚಿಗಳನ್ನು ಅನುಸರಿಸ ಬೇಕಿರುವುದ ರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಹೋಟೆಲ್ ಮುಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಗಿಲು ಮುಚ್ಚಿದ ರೀಡ್ ಅಂಡ್ ಟೇಲರ್: ಆರ್ಥಿಕ ಸಂಕಷ್ಟದಿಂದ ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ವಲಯದಲ್ಲಿರುವ ಆರ್ ಟಿಐಎಲ್ (ರೀಡ್ ಅಂಡ್ ಟೇಲರ್) ಬಟ್ಟೆ ಕಾರ್ಖಾನೆ ಬಾಗಿಲು ಮುಚ್ಚಿದೆ. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಎಸ್.ಕುಮಾರ್ ಈ ಕಾರ್ಖಾನೆಯನ್ನು ಆರ್ ಟಿಐಎಲ್‌ಗೆ ಮಾರಾಟ ಮಾಡಿದ್ದರು. ನಿತಿನ್ ಎಸ್.ಕಾಸ್ಥಿವಾಲ್ ಈ ಕಾರ್ಖಾನೆ ಮಾಲೀಕರಾಗಿದ್ದರು.
ಕಳೆದ 3 ವರ್ಷಗಳ ಹಿಂದೆ ಕಾರ್ಖಾನೆಯನ್ನು 4500 ಕೋಟಿಗೆ ಮಾರಾಟಕ್ಕೆ ಮುಂದಾಗಿದ್ದರು. ಆದರೆ, ಖರೀದಿಸಲು ಯಾರೂ ಬಾರದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಲಿಕ್ವಿಡೇಟರ್ ಆಗಿ ರವಿ ಶಂಕರ್ ದೇವರಕೊಂಡ ನೇಮಕವಾಗಿದ್ದರು. ಅವರ ಆಡಳಿತದಲ್ಲೇ ಕಳೆದ 3 ವರ್ಷಗಳಿಂದ ಕಾರ್ಖಾನೆ ನಡೆಯುತ್ತಿದ್ದರೂ, ಆರ್ಥಿಕ ಸಂಕಷ್ಟದಿಂದ ಪಾರಾ ಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಾರ್ಖಾನೆ ಮುಚ್ಚುವಂತೆ ಲಿಕ್ವಿಡೇಟರ್ ಆದೇಶಿಸಿದ್ದಾರೆ.
ಕಾರ್ಖಾನೆ ಸ್ಥಗಿತಕ್ಕೆ ಅಸಮಾಧಾನ: ಈ ಕಾರ್ಖಾನೆಯಲ್ಲಿ 850 ಕಾಯಂ ನೌಕರರು ಸೇರಿದಂತೆ 1400 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಕಾರ್ಖಾನೆ ಮುಚ್ಚಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರೀಡ್ ಅಂಡ್ ಟೇಲರ್ ನೌಕರರ ಸಂಘದ ಪದಾಧಿಕಾರಿ ಹಾಗೂ ಖಜಾಂಚಿ ಎಂ.ಶಿವಪ್ಪ ಈ ಸಂಬಂಧ ದೂರು ನೀಡಲು ಮುಂದಾಗಿದ್ದಾರೆ. ಹೋರಾಟಕ್ಕೆ ಕಾನೂನು ತೊಡಕಾಗುವುದರಿಂದ ಪ್ರತಿಭಟನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.