ಮಾತನಾಡುವಾಗ ಮತ್ತು ಸಾಮಾನ್ಯ ಉಸಿರಾಟದ ಮೂಲಕವೂ ಗಾಳಿಯಲ್ಲಿ ಕೋವಿಡ್ 19 ವೈರಸ್ ಹರಡುವ ಸಾಧ್ಯತೆ ಇದೆ ಎಂದು ಅಮೆರಿಕದ ಖ್ಯಾತ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ, ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಧರಿಸುವಂತೆ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸುವುದು ಸೂಕ್ತ ಎಂದವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾಗಿರುವ ಅಂಥೋನಿ ಫೌಸಿ, ಇತ್ತೀಚಿನ ಮಾಹಿತಿಗಳ ಪ್ರಕಾರ ವ್ಯಕ್ತಿ ಮಾತನಾಡುವ ವೇಳೆ, ಸಾಮಾನ್ಯ ಉಸಿರಾಟದ ವೇಳೆ ಗಾಳಿಯ ಮೂಲಕ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ. ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಮಾತ್ರ ವೈರಸ್ ಹರಡುತ್ತದೆ ಎಂಬ ಈ ಹಿಂದಿನ ನಂಬಿಕೆಗೆ ಇದು ವ್ಯತಿರಿಕ್ತವಾಗಿದೆ.
ಹೀಗಾಗಿ, ಮಾಸ್ಕ್ ಧರಿಸುವ ಕುರಿತಾಗಿನ ಈಗಿರುವ ಸಲಹೆಯನ್ನು ಸರಕಾರ ಪರಿಷ್ಕರಿಸಬೇಕಿದೆ ಎಂದು ತಿಳಿಸಿದರು. ಸರಕಾರದ ಈಗಿನ ಮಾರ್ಗದರ್ಶಿ ಸೂತ್ರದನ್ವಯ ಕೇವಲ ಸೋಂಕಿತ ವ್ಯಕ್ತಿಗಳು ಹಾಗೂ ಅವರಿಗೆ ಚಿಕಿತ್ಸೆ ನೀಡುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು.
ಈ ಮಧ್ಯೆ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಏ.1ರಂದು ಕೋವಿಡ್ 19 ಬಗೆಗಿನ ಇತ್ತೀಚಿನ ಅಧ್ಯಯನದ ವರದಿಯನ್ನು ಶ್ವೇತಭವನಕ್ಕೆ ಕಳುಹಿಸಿದ್ದು, ಕೋವಿಡ್ 19 ವೈರಸ್ ಸಾಮಾನ್ಯ ಉಸಿರಾಟದ ಮೂಲಕವೂ ಹರಡುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ, ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ ಎಂದು ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಬ್ರಿಟನ್‌ನ ಎನ್‌ಐಎಚ್ ನಡೆಸಿದ ಅಧ್ಯಯನ ವರದಿಯೊಂದು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ನಲ್ಲಿ ಪ್ರಕಟವಾಗಿದ್ದು, ಅದರನ್ವಯ ಕೋವಿಡ್ ವೈರಸ್ ಗಾಳಿ ದ್ರವವಾಗಿದ್ದು, ಗಾಳಿಯಲ್ಲಿ ಬಿದ್ದ ನಂತರದ ಮೂರು ಗಂಟೆಗಳ ಅವಧಿಯವರೆಗೆ ಇತರರಿಗೆ ಹರಡುವ ಸಾಮರ್ಥ್ಯ ಹೊಂದಿದೆ.