Advertisement

ಜುಲೈ ಅಂತ್ಯಕ್ಕೆ 5.5 ಲಕ್ಷ! ; ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸ್ಫೋಟದ ಬಗ್ಗೆ ಅಂದಾಜು

01:36 AM Jun 10, 2020 | Hari Prasad |

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ವೇಗ ನೋಡಿದರೆ ಜು. 31ರ ವೇಳೆಗೆ ದಿಲ್ಲಿಯಲ್ಲಿ ಬರೋಬ್ಬರಿ 5.5 ಲಕ್ಷ ಮಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ. ಹೀಗೆಂದು ಸ್ವತಃ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

Advertisement

ಮಂಗಳವಾರ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ದ ಮುಖ್ಯಸ್ಥ, ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್, ಡಿಡಿಎಂಎ ಅಧಿಕಾರಿಗಳು ಹಾಗೂ ಇತರೆ ಆರೋಗ್ಯ ತಜ್ಞರೊಂದಿಗೆ ನಡೆಸಿದ ಸಭೆಯ ಬಳಿಕ ಸಿಸೋಡಿಯಾ ಈ ವಿಚಾರ ತಿಳಿಸಿದ್ದಾರೆ.

ಜುಲೈ ಅಂತ್ಯದಲ್ಲಿ ಸೋಂಕಿತರ ಸಂಖ್ಯೆ 5.5 ಲಕ್ಷಕ್ಕೇರಲಿದ್ದು, ಆ ಸಮಯದಲ್ಲಿ ದಿಲ್ಲಿಗೆ 80 ಸಾವಿರ ಹಾಸಿಗೆಗಳ ಅಗತ್ಯವೂ ಬೀಳಲಿದೆ. 52 ದಿನಗಳಲ್ಲಿ 60 ಸಾವಿರ ಹಾಸಿಗೆ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ತಿಂಗಳಾಂತ್ಯದಲ್ಲೇ ಆಸ್ಪತ್ರೆಗಳಲ್ಲಿ ಸೋಂಕಿತರ ದಾಖಲಾತಿ ಪ್ರಮಾಣ ಗಣನೀಯವಾಗಿ ಹೆಚ್ಚಲಿದ್ದು, ಕೇಜ್ರಿವಾಲ್‌ ನೇತೃತ್ವದ ಸರಕಾರವು ಎಲ್ಲ ಸಿದ್ಧತೆಗಳನ್ನೂ ಆರಂಭಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಸಾಮುದಾಯಿಕವಾಗಿ ವ್ಯಾಪಿಸಿಲ್ಲ: ದಿಲ್ಲಿಯಲ್ಲಿ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿದೆಯೇ ಎಂಬ ಕುರಿತೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಾಮುದಾಯಿಕ ವ್ಯಾಪಿಸುವಿಕೆ ಆಗಿಲ್ಲ ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿರುವುದಾಗಿ ಸಿಸೋಡಿಯಾ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

ಕೇಂದ್ರದ ಅಧಿಕಾರಿಗಳು ಸೋಂಕು ಸಾಮುದಾಯಿಕವಾಗಿ ವ್ಯಾಪಿಸುತ್ತಿಲ್ಲ ಎಂದು ಹೇಳಿದರೆ, ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರು, ಸುಮಾರು ಅರ್ಧದಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತಜ್ಞರು ಕೂಡ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಕೇಂದ್ರ ಸರಕಾರ ಮಾತ್ರ ಸಾಮುದಾಯಿಕವಾಗಿ ವ್ಯಾಪಿಸಿಲ್ಲ ಎಂದು ಹೇಳುತ್ತಾ ಬಂದಿದ್ದು, ಕೂಡಲೇ ಈ ಕುರಿತ ಗೊಂದಲವನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.

Advertisement

ಆದೇಶ ವಾಪಸ್‌: ಈ ನಡುವೆ, ಕೇವಲ ರೋಗಲಕ್ಷಣ ಹೊಂದಿರುವವರನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸಬೇಕು ಎಂಬ ಆದೇಶವನ್ನು ದಿಲ್ಲಿ ಸರಕಾರ ಮಂಗಳವಾರ ವಾಪಸ್‌ ಪಡೆದಿದೆ. ಈ ಆದೇಶ ಕುರಿತು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸರಕಾರ ಈ ನಿರ್ಧಾರ ಕೈಗೊಂಡಿದೆ. ರೋಗಲಕ್ಷಣ ಇಲ್ಲದೇ ಇರುವವರನ್ನೂ ಪರೀಕ್ಷೆಗೆ ಒಳಪಡಿಸುವುದಾಗಿ ಸರಕಾರ ಸ್ಪಷ್ಟಪಡಿಸಿದೆ. ಜತೆಗೆ, ಬೈಜಾಲ್‌ ಅವರು ಮಂಗಳವಾರ ಸಂಜೆ ಸರ್ವಪಕ್ಷಗಳ ಸಭೆ ನಡೆಸಿ, ಕೋವಿಡ್ ಸ್ಥಿತಿಗತಿ ಕುರಿತು ಚರ್ಚಿಸಿದ್ದಾರೆ.

150ಕ್ಕೂ ಹೆಚ್ಚು ಶಿಕ್ಷಕರಿಗೆ ಸೋಂಕು: ದಿಲ್ಲಿ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ 150ಕ್ಕೂ ಹೆಚ್ಚು ಶಿಕ್ಷಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈವರೆಗೆ ನಾಲ್ವರು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ನಿಂದ ಮೃತಪಟ್ಟ ಮೊದಲ ಶಿಕ್ಷಕಿಗೆ ಕೇಜ್ರಿವಾಲ್‌ ಸರಕಾರ 1 ಕೋಟಿ ರೂ. ಪರಿಹಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next