Advertisement
ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರಸಕ್ತ ತಿಂಗಳಲ್ಲಂತೂ ಸೋಂಕಿನ ವ್ಯಾಪಿಸುವಿಕೆ ಕಂಡು ಕೇಳರಿಯದಷ್ಟು ವೇಗ ಪಡೆದಿದೆ. ಜೂ.1ರಂದು ದೇಶಾದ್ಯಂತ ಸೋಂಕಿತರ ಸಂಖ್ಯೆ 1,90,535 ಆಗಿತ್ತು. ಜೂ.13ರ ವೇಳೆಗೆ ಇದು 3 ಲಕ್ಷ ದಾಟಿದೆ. ಅಂದರೆ, ಕೇವಲ 13 ದಿನಗಳಲ್ಲಿ 1.25 ಲಕ್ಷದಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ಸೋಂಕಿತರು ಮಾತ್ರವಲ್ಲದೆ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೂ.1ರಿಂದ 13ರ ವರೆಗಿನ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಕೊರೊನಾಕ್ಕೆೆ ಬಲಿಯಾಗಿದ್ದಾರೆ. ಇದು ಹೀಗೇ ಮುಂದು ವರಿದರೆ ಜೂನ್ ಅಂತ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಲಿದ್ದಾರೆ.
Related Articles
ದೇಶವಾಸಿಗಳ ಭೀತಿ ಇನ್ನಷ್ಟು ಹೆಚ್ಚಿಸುವಂತೆ ಒಂದೇ ದಿನ ದೇಶಾದ್ಯಂತ 11,458 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಅವಧಿಯಲ್ಲಿ 386 ಮಂದಿ ಮೃತಪಟ್ಟು, 11,458 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 3,493 ಮಂದಿಗೆ ಸೋಂಕು ದೃಢಪಡುವ ಮೂಲಕ, ರಾಜ್ಯದ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿರುವ ಮೊದಲ ರಾಜ್ಯ ಎಂಬ ಕುಖ್ಯಾತಿಗೆ ಮಹಾ ರಾಷ್ಟ್ರ ಪಾತ್ರವಾಗಿದೆ. ಇನ್ನು, ಈ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು , ದೆಹಲಿ ಮೂರನೇ ಸ್ಥಾನದಲ್ಲಿದೆ. ಈ ನಡುವೆ, ದೇಶದಲ್ಲಿ ಗುಣಮುಖ ಪ್ರಮಾಣ ಶೇ.49.94ಕ್ಕೇರಿದ್ದು, ಈವರೆಗೆ 1,54,330 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Advertisement
ಭಾರತದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಕೋವಿಡ್ ಸೋಂಕಿನಿಂದ ಜಾಗತಿಕವಾಗಿ ಮಹಿಳೆಯರಿಗಿಂತ ಪುರುಷರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ದೃಢಪಟ್ಟಿದೆ. ಆದರೆ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಜರ್ನಲ್ ಆಫ್ ಗ್ಲೋಬಲ್ ಹೆಲ್ತ್ ಸೈನ್ಸ್ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ ಮೇ 20ರವರೆಗೆ ಕೊರೊನಾ ಮರಣ ಪ್ರಮಾಣವು ಪುರುಷರಲ್ಲಿ ಶೇ.2.9ರಷ್ಟು ಇದ್ದರೆ, ಮಹಿಳೆಯರಲ್ಲಿ ಶೇ.3.3ರಷ್ಟು ಇದೆ. 5ರಿಂದ 19 ವರ್ಷದ ವರೆಗಿನ ಪುರುಷರಲ್ಲಿ ಮರಣ ಪ್ರಮಾಣ ಅತಿ ಕಡಿಮೆ ಇರುವುದು ಕಂಡು ಬಂದಿದೆ.