ಮಧ್ಯಪ್ರದೇಶ: ಕೋವಿಡ್ ಸೋಂಕಿಗೆ ಬಲಿಯಾದವರ ಶವಗಳ ಕುರಿತು ಆಸ್ಪತ್ರೆಯ ಸಿಬ್ಬಂದಿ, ಆ್ಯಂಬುಲೆನ್ಸ್ ನವರು ತೋರುತ್ತಿರುವ ನಿರ್ಲಕ್ಷ್ಯ ಹಾಗೂ ಅಸಡ್ಡೆಗೆ ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ವಿದಿಶಾದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಆಸ್ಪತ್ರೆಯ ಎದುರು ನಡು ರಸ್ತೆಯಲ್ಲಿ ಶವವೊಂದು ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಿಂದ ಕೆಳಗೆ ಬಿದ್ದಿದೆ.
ಶುಕ್ರವಾರ ಮಧ್ಯಾಹ್ನ ಈ ಅಮಾನವೀಯ ಘಟನೆ ನಡೆದಿದೆ. ಕೋವಿಡ್ ಮಹಾಮಾರಿಗೆ ಬಲಿಯಾದ ವ್ಯಕ್ತಿಯ ಡೆಡ್ ಬಾಡಿ ಸಾಗಿಸಲಾಗುತ್ತಿತ್ತು. ಶವವನ್ನು ಆ್ಯಂಬುಲೆನ್ಸ್ನಲ್ಲಿ ಸರಿಯಾಗಿ ಇಟ್ಟಿರಲಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಹೊರ ಬಂದ ಆ್ಯಂಬುಲೆನ್ಸ್ ನಿಂದ ಅದು ರಸ್ತೆಯಲ್ಲಿ ಬಿದ್ದಿದೆ. ಈ ಘಟನೆಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ ವಾಹನದ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ರಸ್ತೆಯ ಮೇಲೆ ಶವ ಬೀಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಾರ್ವಜನಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು. ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಹಸ್ತಾಂತರಿಸಲು ಆಸ್ಪತ್ರೆಯ ಸಿಬ್ಬಂದಿ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ. ಹಾಗೂ ಮೃತರ ಕುಟುಂಬಗಳಿಗೆ ಸರಿಯಾದ ಮಾಹಿತಿ ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ವಿದಿಶಾ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಪ್ರತಿ ನಿತ್ಯ 25-30 ಜನರು ಕೋವಿಡ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.