Advertisement

ಲಸಿಕೆ: ಮೊದಲ ದಿನದ ಯಶಸ್ಸು; ರಾಜ್ಯದಲ್ಲಿ ಶೇ. 65ರಷ್ಟು ಗುರಿ ಸಾಧನೆ

01:09 AM Jan 04, 2022 | Team Udayavani |

ಬೆಂಗಳೂರು: ದೇಶಾದ್ಯಂತ 15ರಿಂದ 18ರ ವಯೋಮಾನದವರಿಗೆ ಲಸಿಕೆ ನೀಡುವ ಪ್ರಕ್ರಿಯೆಯು ಸೋಮವಾರ ನಿರ್ವಿಘ್ನವಾಗಿ ಆರಂಭವಾಗಿದ್ದು, ದೇಶದೆಲ್ಲೆಡೆ ಯುವ ಜನರು ಉತ್ಸಾಹದಿಂದ ಲಸಿಕೆ ಪಡೆದುಕೊಂಡಿದ್ದಾರೆ.

Advertisement

ಮೊದಲ ದಿನವೇ ದೇಶದ ಸುಮಾರು 40 ಲಕ್ಷ ಹಾಗೂ ರಾಜ್ಯದಲ್ಲಿ 4.14 ಲಕ್ಷ ಮಕ್ಕಳು ಕೊವಾಕ್ಸಿನ್‌ ಲಸಿಕೆಯನ್ನು ಪಡೆದಿದ್ದಾರೆ.

ರಾಜ್ಯದಲ್ಲಿ ಮೊದಲ ದಿನ 6.38 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಗುರಿ ಹಾಕಿ ಕೊಳ್ಳಲಾಗಿತ್ತು. ಅದರಲ್ಲಿ ಶೇ. 65ರಷ್ಟು ಗುರಿ ಸಾಧಿಸಲಾಗಿದೆ. ರಾಜ್ಯದಲ್ಲಿ ಲಭ್ಯವಿದ್ದ 16 ಲಕ್ಷ ಡೋಸ್‌ ಲಸಿಕೆಯಲ್ಲಿ 4.3 ಲಕ್ಷ ಡೋಸ್‌ ವಿತರಣೆಯಾಗಿದೆ. ರಾಜ್ಯದಲ್ಲಿ ಲಸಿಕೆಗೆ ಅರ್ಹರಾದ ಒಟ್ಟು 31.75 ಲಕ್ಷ ವಿದ್ಯಾರ್ಥಿಗಳಿದ್ದಾರೆ.

ಸಿಎಂ ಚಾಲನೆ
ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದ ಮೂಡಲಪಾಳ್ಯದಲ್ಲಿ ಚಾಲನೆ ನೀಡಿದರು.

ಜಿಲ್ಲಾವಾರು ಸಾಧನೆ
ರಾಜ್ಯದಲ್ಲಿ ಸೋಮವಾರ 4 ಸಾವಿರ ಕಡೆ ಬೂತ್‌ ವ್ಯವಸ್ಥೆ ಮಾಡಲಾಗಿತ್ತು. ಅಭಿಯಾನದಲ್ಲಿ 16 ಜಿಲ್ಲೆಗಳಲ್ಲಿ ಉತ್ತಮ ಸಾಧನೆಯಾದರೆ, 15 ಜಿಲ್ಲೆಗಳಲ್ಲಿ ಸಾಧಾರಣ ಗುರಿ ಮುಟ್ಟಲಾಗಿದೆ.

Advertisement

ಹಾವೇರಿ ಜಿಲ್ಲೆಯಲ್ಲಿ 14,064 ವಿದ್ಯಾರ್ಥಿ ಗಳಿಗೆ ಲಸಿಕೆ ನೀಡುವ ಮೂಲಕ ನೀಡಲಾದ ಗುರಿಯಲ್ಲಿ ಎರಡೂವರೆ ಪಟ್ಟು ಸಾಧನೆ ಮಾಡಿದೆ. ಅನಂತರದ ಸ್ಥಾನದಲ್ಲಿ ಬೆಳಗಾವಿ ಇದ್ದು, ಇಲ್ಲಿ 47,720, ಧಾರವಾಡ 11,884, ಕೋಲಾರ 9,856, ಚಿಕ್ಕಮಗಳೂರು 6,778, ಹಾಸನ 13,334, ಕಲಬುರಗಿ 11,293, ಉತ್ತರ ಕನ್ನಡ 16,066, ಉಡುಪಿ 14,500 ಕೊಡಗು 3,103 ಮಕ್ಕಳಿಗೆ ಲಸಿಕೆ ವಿತರಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಿದೆ. ದ.ಕ., ಶಿವಮೊಗ್ಗ, ತುಮಕೂರು, ದಾವಣಗೆರೆ, ಬಾಗಲಕೋಟೆ, ಚಿತ್ರದುರ್ಗದಲ್ಲಿ ಶೇ.60ಕ್ಕಿಂತ ಅಧಿಕ ಗುರಿ ಸಾಧನೆ ಮಾಡಲಾಗಿದೆ.

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

ಕನಿಷ್ಠ ಸಾಧನೆ
ಯಾದಗಿರಿ ಶೇ.24, ಮೈಸೂರು ಶೇ.25, ಬೆಂಗಳೂರು ನಗರ ಶೇ.28, ಚಿಕ್ಕಬಳ್ಳಾಪುರ ಶೇ.33, ಕೊಪ್ಪಳ ಶೇ.34, ಬಳ್ಳಾರಿ ಶೇ.36, ಬೀದರ್‌ ಶೇ.39, ವಿಜಯಪುರ ಶೇ.40, ಗದಗ ಶೇ.40, ರಾಯಚೂರು ಶೇ.47, ಬೆಂಗಳೂರು ಗ್ರಾಮಾಂತರ ಶೇ.50, ಚಾಮರಾಜನಗರ ಶೇ.53, ಬಿಬಿಎಂಪಿ ಶೇ.56, ರಾಮನಗರ ಹಾಗೂ ಮಂಡ್ಯದಲ್ಲಿ ಶೇ.63ರಷ್ಟು ದಾಖಲಾಗಿದೆ.

ಮತ್ತೆ 11 ಮಂದಿಗೆ ಒಮಿಕ್ರಾನ್‌
ರಾಜ್ಯದಲ್ಲಿ ಸೋಮವಾರ 11 ಮಂದಿಗೆ ಒಮಿಕ್ರಾನ್‌ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 77ಕ್ಕೇರಿದೆ. 1,290 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.60ಕ್ಕೆ ಏರಿದೆ. ಮರಣ ಪ್ರಮಾಣ ಶೇ.0.38ಕ್ಕೆ ಏರಿದೆ. 11,345 ಸಕ್ರಿಯ ಪ್ರಕರಣಗಳಿದ್ದು, 232 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,041 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ದೇಶಾದ್ಯಂತ 24 ಗಂಟೆಗಳಲ್ಲಿ 33,750 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿ, 123 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ 1,700ಕ್ಕೆ ಏರಿಕೆಯಾಗಿದೆ.

ಒಮಿಕ್ರಾನ್‌ ನಿಯಂತ್ರಣ: ಗುರುವಾರ ಸಂಪುಟ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್‌ ಹರಡುವುದನ್ನು ತಡೆಗಟ್ಟುವ ಕುರಿತು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಕೊರೊನಾ ವಿರುದ್ಧ ನಮ್ಮ ಯುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಇಂದು ನಾವು ಮಹತ್ವದ ಹೆಜ್ಜೆಯಿಟ್ಟಿದ್ದೇವೆ. ಲಸಿಕೆ ಪಡೆದ ಎಲ್ಲ ಯುವಜನತೆಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆಯಿರಿ ಎಂದು ಕೇಳಿಕೊಳ್ಳುತ್ತೇನೆ.
– ನರೇಂದ್ರ ಮೋದಿ, ಪ್ರಧಾನಿ

ರಾಜ್ಯ ವ್ಯಾಪ್ತಿಯಲ್ಲಿ ಎಲ್ಲ ಮಕ್ಕಳಿಗೂ ಶೀಘ್ರದಲ್ಲೇ ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸೋಂಕಿನ ವಿರುದ್ಧ ಹೋರಾಟ ಮಾಡಲು ಕೇವಲ ಲಸಿಕೆಯಿಂದ ಮಾತ್ರ ಸಾಧ್ಯ. ದೇಶದಲ್ಲಿ ಲಸಿಕೆ ವಿತರಣೆಯಲ್ಲಿ ಅತ್ಯಧಿಕ ಸಾಧನೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದುಕೊಂಡಿದೆ.
ಡಾ| ಕೆ. ಸುಧಾಕರ್‌,
ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next