ವೈರಸ್ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯುವುದಕ್ಕಾಗಿ ವಿಶ್ವದಾದ್ಯಂತ ವಿವಿಧ ಸಂಸ್ಥೆಗಳ ವೈದ್ಯಕೀಯ ತಜ್ಞರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
ಈ ಬೆನ್ನಲ್ಲೇ ಕೋವಿಡ್ ವೈರಸ್ ಗೆ ಲಸಿಕೆ ಅಭಿವೃದ್ಧಿಯಾಗದೆ ಇರಲೂಬಹುದು ಎನ್ನುವ ಆಘಾತಕಾರಿ ಸಂಗತಿಯನ್ನು ಡಬ್ಲ್ಯೂಎಚ್‌ಒನಲ್ಲಿ ಕೋವಿಡ್ ವೈರಸ್ ವಿಷಯಕ್ಕೆ ಸಂಬಂಧಿಸಿದ ತಜ್ಞ ಡಾ.ಡೇವಿಡ್ ನಬಾರೊ ‘ಸಿಎನ್‌ಎನ್’ಗೆ ತಿಳಿಸಿದ್ದಾರೆ.
ಜಗತ್ತಿನಾದ್ಯಂತ 100ಕ್ಕೂ ಅಧಿಕ ಲಸಿಕೆ ಸಂಶೋಧನೆ ಪ್ರಗತಿಯಲ್ಲಿರುವಾಗಲೇ ವರ್ಷಾಂತ್ಯದಲ್ಲಿ ಕೋವಿಡ್ ವೈರಸ್ ಗೆ ಲಸಿಕೆ ಕಂಡುಹಿಡಿದೇ ತೀರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿರುವಂತೆಯೇ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
‘ಜಗತ್ತಿನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಗೆ ಡೆಂಘ್ಯೂ ಬರುತ್ತದೆ. ನಾಲ್ಕು ದಶಕಗಳಲ್ಲಿ 32 ಮಿಲಿಯನ್ ಎಚ್‌ಐವಿಗೆ ಬಲಿಯಾಗಿದ್ದಾರೆ, ಡೆಂಘ್ಯೂಗೆ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿಯೂ ಸೂಕ್ತ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕೋವಿಡ್ ವೈರಸ್ ಗೂ ಹಾಗೆಯೇ ಆಗಬಹುದು ಎನ್ನುವ ಅನಿಸಿಕೆ ಇದೆ.
ಏಕೆಂದರೆ ಇಷ್ಟು ದಿನವಾದರೂ ಸೂಕ್ತ ಲಸಿಕೆ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದರಿಂದ ಮುಂದೆ ಕೋವಿಡ್ ವೈರಸ್ ಗೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯುವುದು ಕಷ್ಟವಾದೀತು, ಜತೆಗೆ ಪರಿಪೂರ್ಣವಾಗಿ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.
ಎಲ್ಲದಕ್ಕೂ ಮೊದಲು ಔಷಧಿಯ ಸಾಮರ್ಥ್ಯ, ಅದರಿಂದ ಸೋಂಕಿತನ ಮೇಲಾಗುವ ಪರಿಣಾಮವನ್ನು ಕೂಡ ಅಧ್ಯಯನ ನಡೆಸಬೇಕಾಗುತ್ತದೆ’ ಎಂದು ಡಾ.ಡೇವಿಡ್ ನಬಾರೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಧಾರವಿಲ್ಲ: ವುಹಾನ್ ಪ್ರಯೋಗಾಲಯದಿಂದ ಕೋವಿಡ್ ವೈರಸ್ ಬಿಡುಗಡೆ ಯಾಗಿದೆ ಎಂಬ ಅಮೆರಿಕದ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದರ ಜತೆಗೆ ಆರೋಪಕ್ಕೆ ಸಂಬಂಧಿಸಿದಂತೆ ಟ್ರಂಪ್ ಆಡಳಿತ ಯಾವುದೇ ಸಾಕ್ಷಾಧಾರಗಳನ್ನು ಬಿಡುಗಡೆ ಮಾಡಿಲ್ಲವೆಂದು ಸಂಸ್ಥೆ ಪ್ರತಿಪಾದಿಸಿದೆ.