Advertisement

ಟ್ರಂಪ್‌ ಮರು ಆಯ್ಕೆ ಕನಸಿಗೆ ಕೋವಿಡ್‌-19 ಕೊಳ್ಳಿ

06:40 PM Apr 15, 2020 | sudhir |

ವಾಷಿಂಗ್ಟನ್‌: ಹದಗೆಟ್ಟಿರುವ ಆರ್ಥಿಕತೆಗೆ ದೊಡ್ಡ ಮಟ್ಟದ ಸರ್ಜರಿ ಮಾಡುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಯತ್ನಕ್ಕೆ ಕೋವಿಡ್‌-19 ವೈರಸ್‌ ಕಲ್ಲು ಹಾಕಿದೆ.

Advertisement

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಆರ್ಥಿಕತೆಗೊಂದು ದೊಡ್ಡ ಸರ್ಜರಿ ಮಾಡಿ ಆ ಮೂಲಕ ತನ್ನ ವರ್ಚಸ್ಸು ವರ್ಧಿಸಿಕೊಳ್ಳುವ ಇರಾದೆ ಟ್ರಂಪ್‌ಗಿತ್ತು.

ಈ ಉದ್ದೇಶದಿಂದಲೇ ಅವರು ಲಾಕ್‌ಡೌನ್‌ ಅನ್ನು ಆದಷ್ಟು ಬೇಗ ತೆರವುಗೊಳಿಸಲು ಉದ್ಯುಕ್ತರಾಗಿದ್ದಾರೆ. ಆದರೆ ವಾಸ್ತವ ಸ್ಥಿತಿ ಮಾತ್ರ ಸಹಕರಿಸುತ್ತಿಲ್ಲ. ಬಹುತೇಕ ರಾಜ್ಯಗಳ ಮೇಯರ್‌ಗಳು ಲಾಕ್‌ಡೌನ್‌ ತೆರವುಗೊಳಿಸಲು ಭಿನ್ನಮತ ಹೊಂದಿದ್ದಾರೆ. ಕೋವಿಡ್‌-19 ಸಮರದಲ್ಲಿ ಟ್ರಂಪ್‌ಗಿಂತಲೂ ಈ ಮೇಯರ್‌ಗಳೇ ಹೆಚ್ಚು ವಿಶ್ವಾಸಾರ್ಹ ಎಂದು ಜನರು ನಂಬಿರುವುದು ಅಧ್ಯಕ್ಷರಿಗಾಗಿರುವ ದೊಡ್ಡ ಹಿನ್ನಡೆ.

ಒಟ್ಟಾರೆ ಕಣ್ಣಿಗೆ ಕಾಣದ ಸೂಕ್ಷ್ಮ ವೈರಾಣುವೊಂದು ಅಮೆರಿಕ ಅಧ್ಯಕ್ಷ ಮರು ಆಯ್ಕೆಯ ಕನಸನ್ನೇ ಭಂಗಗೊಳಿಸುವ ಸಾಧ್ಯತೆಗಳು ಗೋಚರಿಸುತ್ತಿದ್ದು, ಇದು ಟ್ರಂಪ್‌ ಅವರ ನಿದ್ದೆಗೆಡಿಸಿದೆ.

ಲಾಕ್‌ಡೌನ್‌ ತೆರವುಗೊಳಿಸಿ ಜನ ಜೀವನವನ್ನು ಸಹಜ ಸ್ಥಿತಿಗೆ ತರಲು ಟ್ರಂಪ್‌ ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ಇಂಥ ದಿಟ್ಟ ನಿರ್ಧಾರ ಕೈಗೊಳ್ಳುವ ಧೈರ್ಯ ಇಲ್ಲ.

Advertisement

ಈಗಾಗಲೇ ಕೋವಿಡ್‌-19 ಅಮೆರಿಕದಲ್ಲಿ ಮರಣ ಮೃದಂಗ ಬಾರಿಸಿದೆ. ಸುಮಾರು 21,000ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಈ ವೈರಸ್‌ಗೆ ಸದ್ಯಕ್ಕೆ ಲಸಿಕೆಯಾಗಲಿ, ಚಿಕಿತ್ಸೆಯಾಗಲಿ ಲಭ್ಯವಿಲ್ಲ. ಅಲ್ಲದೆ ದೇಶದಲ್ಲಿನ್ನೂ ವೈರಸ್‌ ಪ್ರಸರಣ ನಿಯಂತ್ರಣಕ್ಕೆ ಬಂದಿಲ್ಲ. ಹೀಗಿರುವಾಗ ಲಾಕ್‌ಡೌನ್‌ ಸಡಿಲಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಟ್ಟರೆ ಆಗಬಹುದಾದ ಅನಾಹುತಗಳನ್ನು ಊಹಿಸಿ ಅಧಿಕಾರಿಗಳು ನಡುಗುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಮತ್ತು ಮತ್ತು ವಿಮಾನ ಸಂಚಾರವನ್ನು ಹೇಗೆ ಸುರಕ್ಷಿತವಾಗಿ ಪುನರಾರಂಭಿಸಬಹುದು ಎಂಬ ಕಾರ್ಯಯೋಜನೆಯೇ ಸರಕಾರದ ಮುಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಟ್ರಂಪ್‌ ಲಾಕ್‌ಡೌನ್‌ ಸಡಿಲಿಸಲು ಉತ್ಸುಕರಾಗಿರುವುದು ಆತಂಕವುಂಟು ಮಾಡಿದೆ.

ಎಲ್ಲರೂ ತಮ್ಮ ಉದ್ಯೋಗಕ್ಕೆ ಮರಳಬೇಕು ಎನ್ನುವುದು ಟ್ರಂಪ್‌ ಇರಾದೆಯಾಗಿದೆ. ಈ ಮೂಲಕ ಮರು ಆಯ್ಕೆಯ ತನ್ನ ಇಂಗಿತ ನೆರವೇರಬೇಕೆನ್ನುವುದು ಅವರ ಉದ್ದೇಶ. ಆದರೆ ಲಾಕ್‌ಡೌನ್‌ ವಿಚಾರವನ್ನು ಆಯಾಯ ರಾಜ್ಯಗಳ ನಿರ್ಧಾರಕ್ಕೆ ಬಿಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಟ್ರಂಪ್‌ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಟ್ರಂಪ್‌ ನಿರ್ಧಾರವನ್ನು ಅನುಷ್ಠಾನಿಸುವುದು ಎಣಿಸಿದಷ್ಟು ಸುಲಭವಲ್ಲ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈ ವಿಚಾರವಾಗಿ ಆಡಳಿತದ ಪಡಸಾಲೆಯಲ್ಲೇ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.

ಮೇ 1ಕ್ಕಾಗುವಾಗ ಲಾಕ್‌ಡೌನ್‌ ಸಡಿಲಿಕೆಯಾಗಿ ದೇಶ ಸಹಜತೆಯತ್ತ ಮರಳಬೇಕು ಎನ್ನುವುದು ಟ್ರಂಪ್‌ ಲೆಕ್ಕಾಚಾರ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಕೋವಿಡ್‌ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯವೆನ್ನಲಾಗಿದೆ. ಹಾಗೊಂದು ವೇಳೆ ಲಾಕ್‌ಡೌನ್‌ ಸಡಿಲಿಸಿದರೆ ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗದು. ಕನಿಷ್ಠ 2.5 ಲಕ್ಷ ಮಂದಿ ಸಾಯಬೇಕಾದೀತು ಎಂದು ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.

ಮೇ ಮಾಸಾಂತ್ಯದ ತನಕ ಸಾಮಾಜಿಕ ಅಂತರ ಪಾಲನೆ ಹಾಗೂ ಇನ್ನಿತರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಸಾವಿನ ಸಂಖ್ಯೆಯನ್ನು 50,000 ಮಿತಿಯೊಳಗಿಡಬಹುದು ಎಂಬ ಅಧಿಕಾರಿಗಳ ಸಲಹೆ ಟ್ರಂಪ್‌ಗೆ ರುಚಿಸುತ್ತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next