ಧಾರವಾಡ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೇರಲ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಸುಮಾರು 200 ಎಕರೆಗೂ ಹೆಚ್ಚು ಪೇರಲ ತೋಟಗಳಿದ್ದು, ರೈತರು ಎಲ್-49 ತಳಿಯ ಗಿಡಗಳಿಂದ ಉತ್ತಮ ಫಸಲು ಪಡೆದಿದ್ದಾರೆ. ಪ್ರತಿ ವರ್ಷ ಎಕರೆಗೆ ಒಂದು ಲಕ್ಷ ರೂ.ದಂತೆ ರೈತರಿಗೆ ಗುತ್ತಿಗೆದಾರರು ಲಾವಣಿ ನೀಡುತ್ತಿದ್ದರು. ಈ ಹಣ್ಣು ಗೋವಾ ಸೇರಿದಂತೆ ಸುತ್ತಮುತ್ತಲಿನ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತಿತ್ತು. ಆದರೀಗ ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲದಂತಾಗಿದೆ.
ಶಿರೂರ ಪೇರಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಬೇಡಿಕೆಯುಳ್ಳ ಹಣ್ಣು. ಆದರೆ ಈಗ ಪೇರಲ ತೋಟಗಳನ್ನು ಗುತ್ತಿಗೆ ಹಿಡಿಯುವವರೇ ಇಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ ಎಂದು ಹೇಳುತ್ತಾರೆ ಪೇರು ಬೆಳೆಗಾರ ಪ್ರಕಾಶ ಬಾಳನಗೌಡರ.
ವಿಜ್ಞಾನಿಗಳ ಭೇಟಿ: ನವಲಗುಂದ ತಾಲೂಕಿನ ಶಿರೂರ ಗ್ರಾಮಕ್ಕೆ ಮಂಗಳವಾರ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿತು.ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿತು. ಪೇರಲ ಹಣ್ಣು ಮಾರಾಟಕ್ಕಾಗಿ ಧಾರವಾಡದ ಎಐತ ಉತ್ಪಾದಕ ಕಂಪನಿ ಹಾಗೂ ಬೆಂಗಳೂರು ಹಾಪ್‌ಕಾಮ್ಸ್ ಸಂಪರ್ಕಿಸಿ ರೈತರನ್ನು ಪರಿಚಯಿಸಲಾಗಿದೆ. ರೈತರಿಗೆ ಕೃಷಿ ವಿವಿಯ ಅಗ್ರಿವಾರ್ ರೂಮ್ (18004251150) ಟೋಲ್ ಪ್ರೀ ದೂರವಾಣಿ ಸಂಖ್ಯೆ ನೀಡಿ ಕೃಷಿ ಸಂಬಂಧಿತ ಮಾಹಿತಿ ಪಡೆಯಲು ತಿಳಿಸಿತು.
ಹಿರಿಯ ವಿಜ್ಞಾನಿ ಡಾ| ಶುಭಾ ಎಸ್., ಗೃಹ ವಿಜ್ಞಾನಿ ಡಾ| ಗೀತಾ ತಾಮಗಾಳೆ, ಕೀಟಶಾಸ್ತ್ರ ವಿಜ್ಞಾನಿ ಕಲಾವತಿ ಕಂಬಳಿ ಇದ್ದರು.