ನವದೆಹಲಿ: ಬರೋಬ್ಬರಿ ಎರಡು ವರ್ಷಗಳ ನಂತರ ಅಮೆರಿಕ ತನ್ನ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿದೆ. ಹೀಗಾಗಿ, 2 ಡೋಸ್ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾ ನೆಗೆಟಿವ್ ವರದಿ ಪಡೆದುಕೊಂಡ ಭಾರತೀಯರು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ.
ಇದಲ್ಲದೆ ಅಮೆರಿಕ-ಮೆಕ್ಸಿಕೋ ನಡುವಿನ ಗಡಿಯೂ ತೆರೆಯಲಿದೆ. ಜಗತ್ತಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಾರಂಭಿಸುತ್ತಿದ್ದಂತೆಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿಷೇಧ ಹೇರಿತ್ತು.
ಇದರಿಂದಾಗಿ ಅಮೆರಿಕದಲ್ಲಿ ಇರುವ ಭಾರತೀಯರಿಗೆ ಸ್ವದೇಶಕ್ಕೆ ಆಗಮಿಸಲು, ಭಾರತದಿಂದ ಅಮೆರಿಕಕ್ಕೆ ಕೆಲಸ, ಶಿಕ್ಷಣದ ನಿಮಿತ್ತ ವಿವಿಧ ಪ್ರಾಂತ್ಯಗಳು ತೆರಳಲು ಅನುಕೂಲವಾಗಿದೆ. ಈ ಬಗ್ಗೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಜೈಪುರದ ಆದಿತ್ಯ ಗರ್ಗ್ ಎಂಬುವರು ಅಮೆರಿಕ ಸರ್ಕಾರದ ನಿರ್ಧಾರದಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಕೆಲಸಕ್ಕಾಗಿ ತೆರಳಲು ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಕೇಸು:
ದೇಶದಲ್ಲಿ ಭಾನುವಾರದಿಂದ ಸೋಮವಾರದ ಅವಧಿಯಲ್ಲಿ 11,451 ಹೊಸ ಕೇಸು ಮತ್ತು ಇದೇ ಅವಧಿಯಲ್ಲಿ 266 ಮಂದಿ ಅಸುನೀಗಿದ್ದಾರೆ. ದಿನವಹಿ ದೃಢಪಟ್ಟ ಸೋಂಕು ಪ್ರಕರಣ 262 ದಿನಗಳಲ್ಲಿಯೇ ಕನಿಷ್ಠದ್ದು. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.24 ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.