Advertisement

ರಾಜ್ಯದಲ್ಲಿ ಕೋವಿಡ್‌-19 ಮೂರನೇ ಹಂತಕ್ಕೆ ?

01:11 PM May 01, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಸೋಂಕಿನ ಹಿನ್ನೆಲೆಯೇ ಗೊತ್ತಾಗದ ತೀವ್ರ ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ) ಮತ್ತು ಐಎಲ್‌ಐ (ಶೀತಜ್ವರ ಮಾದರಿಯ ಅನಾರೋಗ್ಯ) ಪ್ರಕರಣಗಳು ಹೆಚ್ಚುತ್ತಿದ್ದರೆ, ಮತ್ತೂಂದೆಡೆ “ರ್‍ಯಾಂಡಮ್‌ ಟೆಸ್ಟ್‌’ನಲ್ಲೂ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಲಾಕ್‌ಡೌನ್‌ನ ಅಂತಿಮ ಹಂತದಲ್ಲಿ ಕಂಡುಬರುತ್ತಿರುವ ಈ ಹೊಸ ಬೆಳವಣಿಗೆ ರಾಜ್ಯವು ತನಗರಿವಿಲ್ಲದೆ ಸೋಂಕಿನ ಮೂರನೇ ಹಂತ ಪ್ರವೇಶಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

Advertisement

ತಜ್ಞರ ಪ್ರಕಾರ ವಿದೇಶ ಪ್ರಯಾಣ, ಸೋಂಕುಪೀಡಿತ ಪ್ರದೇಶ ಪ್ರಯಾಣದ ಹಿನ್ನೆಲೆ ಅಥವಾ ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಹಿನ್ನೆಲೆ ಹೊಂದಿರದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡರೆ ಅಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದರ್ಥ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಪ್ರಕರಣಗಳು ತಜ್ಞರ ಈ ವಿಶ್ಲೇಷಣೆಗೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ 3ನೇ ಹಂತಕ್ಕೆ ಕಾಲಿಟ್ಟಿರುವುದು ಹೆಚ್ಚುಕಡಿಮೆ ಖಚಿತ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 3 ವಾರಗಳಲ್ಲಿ ಎಸ್‌ಎಆರ್‌ಐ ಸಂಬಂಧಿತ 31 ಮತ್ತು ಐಎಲ್‌ಐನಿಂದ ಬಳಲುತ್ತಿರುವ 11 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಐವರಿಗೆ ಮಾತ್ರ ಪ್ರಯಾಣ ಹಿನ್ನೆಲೆ ಅಥವಾ ಪೀಡಿತರ ಸಂಪರ್ಕ ಇದೆ. ಉಳಿದ 37 ಮಂದಿಯ ಸೋಂಕಿನ ಹಿನ್ನೆಲೆ ಪತ್ತೆಯಾಗಿಲ್ಲ. ಈ ಎಲ್ಲ ಪ್ರಕರಣಗಳೂ ಕಂಟೈನ್ಮೆಂಟ್‌ ಝೋನ್‌ನಲ್ಲೇ ಪತ್ತೆಯಾಗಿವೆ.

ಖಚಿತಪಡಿಸಿಕೊಳ್ಳುವುದು ಅಗತ್ಯ
ಇತ್ತೀಚೆಗೆ ಸೋಂಕುಪೀಡಿತರ ಸಂಪರ್ಕ ಹಿನ್ನೆಲೆ ಹೊಂದಿರದ ಎಸ್‌ಎಆರ್‌ಐ ಮತ್ತು ಐಎಲ್‌ಐ ಪ್ರಕರಣಗಳು ಹೆಚ್ಚುತ್ತಿದ್ದು, ಅಂತಹ ಪ್ರದೇಶಗಳಲ್ಲಿ ಸೋಂಕು ಸಮು ದಾಯಕ್ಕೆ ಹರಡಿದೆ. ನಾವು ಬಹುತೇಕ ಮೂರನೇ ಹಂತದಲ್ಲಿದ್ದೇವೆ. ಹೀಗಾ ಗಿಯೇ ಎಲ್ಲ ಐಎಲ್‌ಐ ಮತ್ತು ಎಸ್‌ಎಆರ್‌ಐ ರೋಗಿಗಳನ್ನು ಪರೀಕ್ಷಿಸಲು ಸೂಚಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

Advertisement

ಮುಖ್ಯವಾಗಿ ಕಂಟೈನ್ಮೆಂಟ್‌ ಪ್ರದೇಶ ದಲ್ಲಿ ಹಿನ್ನೆಲೆ ಹೊಂದಿರದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟರೆ ಆ ಪ್ರದೇಶದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದರ್ಥ. ಈ ಹಿನ್ನೆಲೆಯಲ್ಲಿ ಮೂರನೇ ಹಂತ ಪ್ರವೇಶಿಸಿರುವುದನ್ನು ರ್‍ಯಾಂಡಮ್‌ ಪರೀಕ್ಷೆಯ ಜತೆಗೆ ಪೂರಕ ಕ್ರಮಗಳ ಮೂಲಕ ಶೀಘ್ರ ಖಚಿತಪಡಿಸಿಕೊಳ್ಳುವ ಆವಶ್ಯಕತೆ ಇದೆ ಎಂದು ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

ಪಾದರಾಯನಪುರದಲ್ಲಿ ನಡೆದ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಯಾವುದೇ ಸಂಪರ್ಕ ಹಿನ್ನೆಲೆ ಇಲ್ಲದ ಆಯ್ದ 71 ಮಂದಿಗೆ ಪರೀಕ್ಷೆ ನಡೆಸಿ ದಾಗ ಮೂವರಲ್ಲಿ ದೃಢಪಟ್ಟಿದೆ.

ಪಾದರಾಯನಪುರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಖಾಸಗಿ ವಾಹಿನಿ ಕೆಮರಾ ಮನ್‌ ಸಹಿತ ಆರು ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಉದ್ದೇಶಿತ ಪ್ರದೇಶದಲ್ಲಿ ಸಮುದಾಯಕ್ಕೆ ಸೋಂಕು ಹರಡಿದೆ ಎಂದು ಖಚಿತಪಟ್ಟಂತಾಗಿದೆ. ಒಂದು ವೇಳೆ ಇಲ್ಲಿ ಹೆಚ್ಚು ಪರೀಕ್ಷೆ ಮಾಡಿದರೆ, ಇನ್ನಷ್ಟು ಪ್ರಕರಣಗಳು ಪತ್ತೆಯಾಗು ವುದರಲ್ಲಿ ಅನುಮಾನವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಕಂಟೈನ್ಮೆಂಟ್‌ನಲ್ಲೂ ರ್‍ಯಾಂಡಮ್‌ ಪರೀಕ್ಷೆ
ರಾಜ್ಯದ ಕಂಟೈನ್ಮೆಂಟ್‌ ಪ್ರದೇಶ ಗಳಲ್ಲಿಯೇ ಎಸ್‌ಎಆರ್‌ಐ ಮತ್ತು ಐಎಲ್‌ಐ ಹಿನ್ನೆಲೆಯ ಒಟ್ಟು 41 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಪಾದರಾಯನಪುರದಲ್ಲಿ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಿಯಂತ್ರಿತ ವಲಯಗಳಲ್ಲೂ ಈ ಪರೀಕ್ಷೆ ನಡೆಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಸದ್ಯ ರಾಜ್ಯದಲ್ಲಿ ಒಟ್ಟು 123 ಕಂಟೈನ್ಮೆಂಟ್‌ ವಲಯಗಳಿವೆ. ಈ ಪ್ರದೇಶಗಳಲ್ಲಿ ಒಟ್ಟು 73,970 ಮನೆಗಳಿದ್ದು, 4,12,278 ಮಂದಿ ವಾಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಹೊಂದಿರುವ
ಕೋವಿಡ್‌-19 ಪೀಡಿತರು ಈ ಹಿಂದೆ ಯಾರಾದರೂ ಸೋಂಕು ಪೀಡಿತರನ್ನು ಸಂಪರ್ಕಿಸಿರಲೇಬೇಕು. ಒಂದು ವೇಳೆ ಸಂಪರ್ಕಿತರ ಪತ್ತೆಯಾಗದೆ ಸೋಂಕು ಹೆಚ್ಚಳವಾಗಿದೆ ಎಂದಾದರೆ ರ್‍ಯಾಂಡಮ್‌ ಪರೀಕ್ಷೆ ಮಾಡಿ ಸಮುದಾಯಕ್ಕೆ ಹರಡಿದೆಯೇ ಎಂದು ಖಚಿತಪಡಿಸಿ ಕೊಳ್ಳಬೇಕಾಗುತ್ತದೆ.
-ಡಾ| ಬಿ.ಜಿ. ಪ್ರಕಾಶ್‌ ಕುಮಾರ್‌, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರು, ಸಾಂಕ್ರಾಮಿಕ ರೋಗಗಳ ವಿಭಾಗ.

-  ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next