ಬೆಂಗಳೂರು: ಕೋವಿಡ್ 19 ಸೋಂಕಿನ ಕಾರಣದಿಂದ ಮುಂದೂಡಲ್ಪಟ್ಟಿದ್ದ ರಾಜ್ಯ ವಿಧಾನ ಮಂಡಲ ಅಧಿವೇಶನ ಇದೇ ಸೆಪ್ಟಂಬರ್ 21ರಂದು ಪ್ರಾರಂಭಗೊಳ್ಳಲಿದೆ.
ಇದಕ್ಕೆ ಪುರಕವಾಗಿ ಕಲಾಪದಲ್ಲಿ ಭಾಗವಹಿಸುವ ಶಾಸಕರು ಕೋವಿಡ್ 19 ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.
ವಿಧಾನ ಸಭೆಯ ಸದಸ್ಯರು ಕಲಾಪ ಪ್ರಾರಂಭಗೊಳ್ಳುವ 72 ಘಂಟೆಗಳ ಮುಂಚಿತವಾಗಿ RTPCR ಪರೀಕ್ಷೆಗೆ ಒಳಗಾಗಿ, ವರದಿಯನ್ನು ಪಡೆಯಲು ಅನುಕೂಲವಾಗುವಂತೆ ವಿಧಾನ ಸೌಧದ ಬ್ಯಾಂಕ್ವೆಟ್ ನಲ್ಲಿ ಇಂದು ಬೆಳಗ್ಗೆಯಿಂದಲೇ ವ್ಯವಸ್ಥೆ ಮಾಡಲಾಗಿದೆ.
ವಿಧಾನ ಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ವತಃ RTPCR ಪರೀಕ್ಷೆಗೆ ಒಳಪಟ್ಟು ಸದಸ್ಯರೆಲ್ಲರೂ RTPCR ಪರೀಕ್ಷೆಗೆ ಒಳಗಾಗುವಂತೆ ಪ್ರೇರೇಪಿಸಿದರು.
ಸದರಿ ವ್ಯವಸ್ಥೆಯನ್ನು ವಿಧಾನ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬಳಸಿಕೊಳ್ಳುವಂತೆ ಕಾಗೇರಿ ಅವರು ನಿರ್ದೇಶನ ನೀಡಿದರು.
ಅಲ್ಲದೆ, ಬ್ಯಾಂಕ್ವೆಟ್ ಹಾಲ್ ನಲ್ಲಿ ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ RTPCR ಪರೀಕ್ಷೆಗೆ ಮಾಡಲಾಗಿರುವ ವ್ಯವಸ್ಥೆಯನ್ನೂ ಸಹ ಸಭಾಧ್ಯಕ್ಷರು ಇದೇ ಸಂದರ್ಭದಲ್ಲಿ ಪರಿಶೀಲಿಸಿದರು.