ಉಡುಪಿ: ಕಳೆದೊಂದು ವಾರದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದವರ ಆಗಮನದಿಂದಾಗಿ ಹಾಟ್‌ಸ್ಪಾಟ್ ಸಂಪರ್ಕದವರ ಮಾದರಿ ಸಂಗ್ರಹದ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಲಕ್ಷ ಜನಸಂಖ್ಯೆಯ ಶೇಕಡಾವಾರು ಮಾದರಿ ಸಂಗ್ರಹದಲ್ಲಿ ರಾಜ್ಯದಲ್ಲಿ ನಂಬರ್ 1 ಆಗಿರುವ ಉಡುಪಿ ಜಿಲ್ಲೆಯಲ್ಲಿ ಮೇ 11ರ ವರೆಗೆ 1,668 ಜನರ ಮಾದರಿ ಸಂಗ್ರಹ ನಡೆದಿದೆ.
ಮೇ 11ರಂದು 21 ಮಂದಿ, ಮೇ 10ರಂದು 81, ಮೇ 9ರಂದು 50, ಮೇ 8ರಂದು 45, ಮೇ 7ರಂದು 39 ಮಂದಿ, ಮೇ 6ರಂದು 47 ಮಂದಿ, ಮೇ 5ರಂದು 58 ಹಾಟ್‌ಸ್ಪಾಟ್ ಸಂಪರ್ಕದ ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮೇ 4ರಂದು ಹಾಟ್‌ಸ್ಪಾಟ್ ಸಂಪರ್ಕದ 14 ಮಂದಿ, ಮೇ 3ರಂದು ಐವರು, ಮೇ 2ರಂದು ಒಬ್ಬರು, ಮೇ 1ರಂದು ಇಬ್ಬರು ಹಾಟ್‌ಸ್ಪಾಟ್ ಸಂಪರ್ಕದವರ ಮಾದರಿ ಸಂಗ್ರಹಿಸಲಾಗಿತ್ತು.ಮೇ 5ರಿಂದ ಹೊರ ರಾಜ್ಯದವರ ಆಗಮನ ಬಳಿಕ ಹಾಟ್‌ಸ್ಪಾಟ್ ಪ್ರದೇಶದಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಅಂಕಿ-ಅಂಶಗಳಿಂದ ತಿಳಿದುಬರುತ್ತಿದೆ.
ಸೋಮವಾರ 41 ಜನರ ಮಾದರಿ ಸಂಗ್ರಹ ಆಗಿದ್ದು ಇವರಲ್ಲಿ 8 ಮಂದಿ ಉಸಿರಾಟದ ಸಮಸ್ಯೆಯವರು, 12 ಮಂದಿ ಫ್ಲೂ ಜ್ವರದವರು, 21 ಮಂದಿ ಹಾಟ್‌ಸ್ಪಾಟ್ ಸಂಪರ್ಕದವರಿದ್ದಾರೆ. 122 ಜನರ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆೆ. 151 ಜನರ ವರದಿಗಳು ಬರಬೇಕಿವೆ. ಪಡುಬಿದ್ರಿಯ ತರಕಾರಿ ವ್ಯಾಪಾರಿ, ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಜಿಲ್ಲೆಯ 30 ಜನರ ಮಾದರಿಗಳ ವರದಿಗಳು ಇನ್ನೂ ಬಂದಿಲ್ಲ.