ಹಾಸನ: ಕೋವಿಡ್ 19 ಶಂಕಿತರನ್ನು ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಕೂಡದು. ಕೋವಿಡ್ 19 ಆಸ್ಪತ್ರೆಯೆಂದು ಘೋಷಿಸಿರುವ ಜಿಲ್ಲಾಸ್ಪತ್ರೆಗೇ ಕರೆ ತಂದು ಪರೀಕ್ಷೆ ಮಾಡ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ 19 ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾನಾಡಿದ ಅವರು, ಕೋವಿಡ್ 19 ಚಿಕಿತ್ಸೆಗಾಗಿ ಸದ್ಯಕ್ಕೆ 200 ಹಾಸಿಗೆಗಳ ವ್ಯವಸ್ಥೆ ಮಾಡಿ, ಆನಂತರ ಪರಿಸ್ಥಿತಿ ನೋಡಿಕೊಂಡು ಹಾಸಿಗೆಗಳ ಸಾಮರ್ಥಯ ವಿಸ್ತರಿಸಿ ಎಂದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲೆಯಲ್ಲಿ ಈವರೆಗೆ 4.28 ಲಕ್ಷ ಮನೆಗಳ ಸಮೀಕ್ಷೆ ನಡೆಸಿ 1,520 ಜ್ವರದ ಪ್ರಕರಣನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಲಾಗಿದೆ. 452 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದರು.
ಹರಿಹಾಯ್ದ ರೇವಣ್ಣ: ಸಭೆಯಲ್ಲಿ ವೆಂಟಿಲೇಟರ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ಶಾಸಕ ರೇವಣ್ಣ ತಾಲೂಕು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸಬೇಕು. ಹೆರಿಗೆ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಹೆರಿಗೆ ಪ್ರಕರಣಗಳನ್ನೂ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಿಗೇ ಕರೆದೊಯ್ಯುವಂತೆ 108 ಆ್ಯಂಬುಲೆನ್ಸ್‌ಗಳಿಗೆ ನಿರ್ದೇಶನ ನೀಡಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಈ ಸಭೆಯನ್ನು ಕೋವಿಡ್ 19 ನಿಯಂತ್ರಣಗಳ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದೆ. ಇತರೆ ಅಭಿವೃದ್ಧಿ ವಿಷಯಗಳನ್ನು ಕೇಳಲು ನನಗೆ ಸಮಯವಿಲ್ಲ ಎಂದು ಹೇಳುತ್ತಿದ್ದಂತೆ ಸಿಟ್ಟಿಗೆದ್ದ ರೇವಣ್ಣ ಅವರು, ಸಭೆಯಿಂದ ಹೊರಡಲು ಮುಂದಾದರು. ಈ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಶಾಸಕ ಪ್ರೀತಂ ಗೌಡ ಸಮಾಧಾನ ಪಡಿಸಿದರು.
ಪ್ರಜ್ವಲ್ ರೇವಣ್ಣ – ಪ್ರೀತಂಗೌಡ ವಾಗ್ವಾದ: ಲಾಕ್‌ಡೌನ್ ಸಂದರ್ಭದಲ್ಲಿ ಹಾಸನ ಕ್ವಾಲಿಟಿ ಬಾರ್‌ನಲ್ಲಿ ಲಾಕ್‌ಡೌನ್ ಸಮಯದಲ್ಲಿಯೂ ಹಿಂಬಾಗಿಲಿನಲ್ಲಿ ಮದ್ಯ ಮಾರಾಟ ನಡೆದಿದೆ. ಎಂದು ಸಂಸದ ಪ್ರಜ್ವಲ್ ರೇವಣ್ಣ ಆಪಾದಿಸಿದರು. ಈ ಸಂದರ್ಭದಲ್ಲಿ ಕ್ವಾಲಿಟಿ ಬಾರ್ ಮಾಲೀಕನ ಪರ ಮಾತನಾಡಲು ಪ್ರೀತಂ ಜೆ.ಗೌಡ ಹಾಗೂ ಪ್ರಜ್ವಲ್ ಅವರ ನಡುವೆ ವಾಗ್ವಾದ ನಡೆಯಿತು. ಸಚಿವರು ಮತ್ತು ಇತರೆ ಶಾಸಕರು ಮಧ್ಯ ಪ್ರವೇಶಿಸಿ ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ನಂತರ ಚರ್ಚೆ ಅಂತ್ಯವಾಯಿತು.
ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಶಿವಲಿಂಗೇಗೌಡ, ಬಾಲಕೃಷ್ಣ, ಲಿಂಗೇಶ್, ಗೋಪಾಲಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್, ಡಿಎಚ್‌ಒ ಸತೀಶ್ ಮೊದಲಾದವರು ಇದ್ದರು.