Advertisement
ಸಾರ್ವಜನಿಕ ಜೀವನದಲ್ಲಿರುವವರು ಜನಸಾಮಾನ್ಯರ ನಡುವೆ ಇರಬೇಕಾದ ಅನಿವಾರ್ಯತೆ ಇದೆ.
Related Articles
Advertisement
ರಾಜ್ಯದ ಮಟ್ಟಿಗೆ ಹೇಳಬೇಕಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸೋಂಕು ದೃಢಪಟ್ಟು ಚಿಕಿತ್ಸೆಯ ಅನಂತರ ಗುಣಮುಖರಾಗಿದ್ದಾರೆ.
ಇದರ ನಡುವೆಯೇ ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಡಾ| ಸುಧಾಕರ್, ಶಶಿಕಲಾ ಜೊಲ್ಲೆ, ಗೋಪಾಲಯ್ಯ, ಬೈರತಿ ಬಸವರಾಜ್ ಸಹಿತ ಸಂಪುಟದ ಹಲವಾರು ಸಚಿವರಿಗೆ ಕೋವಿಡ್ 19 ಸೋಂಕು ದೃಢಪಟ್ಟು ಚೇತರಿಸಿಕೊಂಡಿದ್ದಾರೆ. ಸಾಕಷ್ಟು ಶಾಸಕರಿಗೂ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೈನಂದಿನ ಕೆಲಸದ ನಡುವೆಯೂ ಎಚ್ಚರಿಕೆ ತಪ್ಪುವಂತಿಲ್ಲ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿ ಪ್ರಮುಖ ಸ್ಥಳಗಳಲ್ಲಿ ಕೆಲಸ ಮಾಡುವ ಅಧಿಕಾರಿ ಸಿಬಂದಿ ಜಾಗರೂಕತೆಯಿಂದ ಇದ್ದು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದರ ಜತೆಗೆ ತಮ್ಮನ್ನು ಭೇಟಿ ಮಾಡಲು ಬರುವವರೂ ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಉಲ್ಲಂಘನೆಯಾಗುತ್ತಿದ್ದರೆ ಕಠಿನವಾಗಿಯೇ ವರ್ತಿಸಬೇಕಾಗಿದೆ. ಇಲ್ಲದಿದ್ದರೆ ಸಮೂಹಕ್ಕೆ ಸೋಂಕು ವ್ಯಾಪಕವಾಗಿ ಹಬ್ಬಿ ಮತ್ತಷ್ಟು ತಿಂಗಳು ರಾಜ್ಯವನ್ನು ಕಾಡುವ ಅಪಾಯ ಇದ್ದೇ ಇದೆ.
ನಾವೆಲ್ಲರೂ ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳು ವಿಧಾನ ಮಂಡಲ, ಸಂಸತ್‌ಗಳಲ್ಲಿ ನಮ್ಮನ್ನು ಪ್ರತಿನಿಧಿಸುತ್ತಾರೆ. ಅವರು ತಮ್ಮನ್ನು ತಾವು ಕೋವಿಡ್ 19 ಸೋಂಕಿದ ಕಾಪಾಡಿಕೊಳ್ಳುವುದರಲ್ಲಿ ಎಲ್ಲರ ಹಿತ ಅಡಗಿದೆ. ಜತೆಗೆ, ಅವರು ಎಲ್ಲರಿಗೂ ಮಾದರಿಯಾಗಿ ” ಕೋವಿಡ್ 19′ ವಿರುದ್ಧದ ಹೋರಾಟದಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆಯೂ ಇದೆ.
ಜನರ ಜತೆ ಬೆರೆಯುವುದು ಅನಿವಾರ್ಯ. ಆದರೆ ಆರೋಗ್ಯ ವಿಚಾರದಲ್ಲಿ ಕಟ್ಟುಪಾಡುಗಳನ್ನು ವಿಧಿಸಿಕೊಳ್ಳುವ ಅನಿವಾರ್ಯತೆ ಇದೆ.
ಆ ನಿಟ್ಟಿನಲ್ಲಿ ಸೆ.21ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನಕ್ಕೆ ಬರುವ ಸಚಿವರು-ಶಾಸಕರು, ಅಧಿಕಾರಿ-ಸಿಬಂದಿಯಾದಿಯಾಗಿ ಎಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಪಟ್ಟು ವರದಿ ಸಮೇತ ಪ್ರವೇಶ ಮಾಡಬೇಕು ಎಂಬ ನಿಯಮ ರೂಪಿಸಿರುವುದು ಶ್ಲಾಘನೀಯ. ಇದರಿಂದಾಗಿ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತವೆ ಜತೆಗೆ ಸೋಂಕಿತರಿಂದ ಇತರರಿಗೆ ಹರಡುವುದು ತಪ್ಪುತ್ತದೆ.
ಕೋವಿಡ್ 19 ಸೋಂಕಿನೊಂದಿಗೆ ಬದುಕಬೇಕು ನಿಜ. ಆದರೆ ನಿಯಂತ್ರಣ ಕ್ರಮಗಳು ಆವಶ್ಯಕ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಎಚ್ಚರಿಕೆ ವಹಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಕೋವಿಡ್ 19 ಸೋಂಕನ್ನು ಹಿಮ್ಮೆಟ್ಟಿಸಬೇಕಾಗಿದೆ.