Advertisement
ಈ ಹಿಂದಿನ ಮಳೆಗಾಲದ ಸಂದರ್ಭ ಹಲವೆಡೆ ತೋಡುಗಳಲ್ಲಿ ಹೂಳು, ಕಸ ತುಂಬಿ ಕೃತಕ ನೆರೆಹಾವಳಿ ಉಂಟಾಗಿತ್ತು. ರಾಜಕಾಲುವೆಗಳು ಕೂಡ ತುಂಬಿ ಹರಿದು ಸಮಸ್ಯೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಮಹಾನಗರ ಪಾಲಿಕೆ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಮಳೆನೀರು ಹರಿಯುವ ಎಲ್ಲ ಚರಂಡಿಗಳ ಹೂಳೆತ್ತಲು ಯೋಜನೆ ರೂಪಿಸಿತ್ತು. ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸಿ ಕೆಲವೆಡೆ ಕಾಮಗಾರಿ ಕೂಡ ಆರಂಭಗೊಂಡಿತ್ತು. ಆದರೆ ಕಳೆದ ಮೂರು ದಿನಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಾಲಿಕೆ ಪೌರ ಕಾರ್ಮಿಕರು ಕಸ ವಿಲೇವಾರಿ ಕೆಲಸವನ್ನು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಔಷಧ ಸಿಂಪಡಣೆ, ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ಪಾಲಿಕೆ ವತಿಯಿಂದ ನಡೆಯುವ ಬಹುತೇಕ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ.
ಪ್ರಮುಖ ಕಾಮಗಾರಿಗಳಲ್ಲೊಂದಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆಯ ದುರಸ್ತಿ ನಾಲ್ಕು ದಿನಗಳ ಹಿಂದಷ್ಟೇ ಆರಂಭಗೊಂಡಿತ್ತು. ಇದಕ್ಕಾಗಿ ವಾಹನ ಸಂಚಾರ ಮಾರ್ಪಾಡು ಮಾಡಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಲಾರಿ, ಟ್ರಕ್ ಮೊದಲಾದ ಘನ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿತ್ತು. ಆದರೆ ಸೇತುವೆ ಕಾಮಗಾರಿಯೂ ಈಗ ನಿಂತು ಹೋಗಿದೆ. ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವುದರಿಂದ ವಾಹನ ಸಂಚಾರವೂ ಕಡಿಮೆ ಇದೆ. ಆದರೆ ಮುಂದಿನ ಮಳೆಗಾಲದೊಳಗೆ ಸೇತುವೆ ದುರಸ್ತಿ ಪೂರ್ಣವಾಗದಿದ್ದರೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇದೆ.
Related Articles
ಮಳೆಗಾಲಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಚರಂಡಿ ಹೂಳೆತ್ತುವ, ಮತ್ತಿತರ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಕೆಲಸ ಆರಂಭವಾಗಿತ್ತು. ಆದರೆ ಕೊರೊನಾ ಸೋಂಕಿನಿಂದಾಗಿ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪಾಲಿಕೆ ಕೂಡ ಪೂರ್ಣವಾಗಿ ತೊಡಗಿಸಿಕೊಂಡಿದೆ. ಮಳೆಗಾಲಕ್ಕೆ ಸಿದ್ಧಗೊಳ್ಳುವುದು ಕೂಡ ಸವಾಲು. ಎಲ್ಲವೂ ಸಹಜ ಸ್ಥಿತಿಗೆ ಬಂದ ಕೂಡಲೇ ಸಮರೋಪಾದಿ ಕೆಲಸಗಳು ನಡೆಯಲು ಕ್ರಮ ಕೈಗೊಳ್ಳಲಾಗುವುದು.
-ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ
Advertisement