ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದು, ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ 1.50 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ(ಏಪ್ರಿಲ್ 19) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್
ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ ದಾಖಲೆಯ 2.73 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈಗ ದೇಶದಲ್ಲಿ ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟಿರುವುದಾಗಿ ವರದಿ ವಿವರಿಸಿದೆ.
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ 24ಗಂಟೆಯಲ್ಲಿ ದೇಶದಲ್ಲಿ 2,73,810 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದ್ದು, 1619 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 1,44,178 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,50, 61, 919ಕ್ಕೆ ಏರಿಕೆಯಾಗಿದೆ. ಇದರಲ್ಲಿ 19, 29, 329 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಈವರೆಗೆ 1,29, 53, 821 ಮಂದಿ ಗುಣಮುಖರಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,78, 769ಕ್ಕೆ ಏರಿಕೆಯಾಗಿದೆ. ಭಾನುವಾರ(ಏಪ್ರಿಲ್ 18) ದೇಶದಲ್ಲಿ 2,61,500 ಹೊಸ ಕೋವಿಡ್ ಸೋಂಕು ಪ್ರಕರಣ ವರದಿಯಾಗಿತ್ತು. ಕೋವಿಡ್ ಸೋಂಕು ಪ್ರಕರಣ ದಿಢೀರನೆ ಹೆಚ್ಚಳವಾದ ಪರಿಣಾಮ ಆಸ್ಪತ್ರೆಗಳಲ್ಲಿ ಬೆಡ್ಸ್ ಹಾಗೂ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ಜೀ ನ್ಯೂಸ್ ವರದಿ ತಿಳಿಸಿದೆ.