ಬೆಂಗಳೂರು: ನಗರದ ಐಟಿ-ಬಿಟಿ ಸೇರಿ ವಿವಿಧ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ತಿಂಡಿ,ಊಟ ಪಾರ್ಸಲ್ ಪಡೆಯುವವರ ಸಂಖ್ಯೆ ಕುಸಿದಿದೆ. ಇದರ ನೇರ ಪರಿಣಾಮ ಝೊಮ್ಯಾಟೊ, ಸ್ವಿಗ್ಗಿಗೆ ಆಗಿದೆ. ಮನೆಯಲ್ಲೇ ಕೆಲಸ ಮಾಡುವ ಕಾರಣ ಬೈಕ್ ಟ್ಯಾಕ್ಸಿಗಳಿಗೂ ಬಿಸಿ ತಟ್ಟಿದೆ.
ಊಟ ಆರ್ಡ್‌ರ್ ಮಾಡಿ ಅದನ್ನು ತರುವ ಡೆಲಿವರಿ ಬಾಯ್‌ಗೆ ಸೋಂಕು ಇದ್ದರೆ ಅದು ನಮಗೂ ತಗುಲಲಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಕಳೆದ ಕೆಲವು ವರ್ಷಗಳಿಂದ ಇ- ಕಾರ್ಮಸ್ ಸಾವಿರಾರು ಉದ್ಯೋಗ ಸೃಷ್ಟಿ ಮಾಡಿ, ಕೋಟ್ಯಂತರ ರೂ. ವಹಿವಾಟಿಗೆ ಕಾರಣವಾಗಿದೆ. ಕೈಯಲ್ಲೊಂದು ಬೈಕ್ ಇದ್ದರೆ ಸಾಕು ಉದ್ಯೋಗ ಸಿಗಲಿದೆ ಎಂಬ ಭರವಸೆ ಇ- ಕಾರ್ಮಸ್ ನೀಡಿತ್ತು. ಆದರೆ, ಪ್ರಸ್ತುತ ದಿನದಲ್ಲಿ ನಗರದ ಸುಮಾರು 20-25 ಸಾವಿರ ಡೆಲಿವರಿ ಬಾಯ್‌ಗಳಿಗೆ ಕೆಲಸದ ಅಭದ್ರತೆ ಎದುರಾಗಿದೆ.
ತಿಂಗಳ ಹಿಂದೆಯೇ ಬಿಡುವಿಲ್ಲದಂತೆ ಆರ್ಡರ್‌ಗಳು ಇದ್ದವು. ಪ್ರತಿದಿನ 30ಕ್ಕೂ ಅಧಿಕ ಫುಡ್ ಡೆಲಿವರಿ ಮಾಡುತ್ತಿದ್ದೆ. ದಿನಲೂ 1500 ರೂ.ಗೂ ಅಧಿಕ ಸಂಪಾದನೆ ಆಗುತ್ತಿತ್ತು. ಇದನ್ನೇ ನಂಬಿ ಜೀವನ ಸಾಗುತ್ತಿತ್ತು. ಆದರೆ, ಕೋವಿಡ್-19 ಹಿನ್ನೆಲೆ ವಾರದಿಂದ ಆರ್ಡರ್‌ಗಳೆಲ್ಲಾ ಕಡಿಮೆಯಾಗುತ್ತಿವೆ. ಕಳೆದ ತಿಂಗಳಿಗೆ ಹೋಲಿಸಿದರೆ ಶೇ.50ರಷ್ಟು ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಸಮಸ್ಯೆ ಉಂಟಾಗಲಿದೆ’ ಎನ್ನುತ್ತಾರೆ ವಿಜಯನಗರದ ಮನೋಜ್.
ಬೈಕ್ ಟ್ಯಾಕ್ಸಿ ಹತ್ತಲು ಹಿಂದೇಟು: ಕೋವಿಡ್-19 ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಜನರು ಬೈಕ್ ಟ್ಯಾಕ್ಸಿಯಲ್ಲಿ ಸಂಚರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸಂಚರಿಸದರೂ ಆಂತದಲ್ಲೇ ಸಂಚರಿಸುತ್ತಾರೆ. ಅವರು ನೀಡುವ ಹೆಲ್ಮೆಟ್ ಪಡೆಯಲು ಒಪ್ಪುತ್ತಿಲ್ಲ. ಕಾರಣ ಸೋಂಕು ಹರಡುವ ಭಯ. ಹೆಲ್ಮೆಟ್ ಹಾಕದಿದ್ದ ಪೊಲೀಸರ ಭಯ. ಹೀಗಾಗಿ ರೈಡನ್ನೇ ರದ್ದು ಮಾಡುತ್ತಿದ್ದಾರೆ. ವಾರದಿಂದ ಬೈಕ್ ಟ್ಯಾಕ್ಸಿಯಲ್ಲಿ ಬರುವವರ ಸಂಖ್ಯೆ ತೀರ ಕಡಿಮೆಯಾ ಗಿದೆ. ಈ ಹಿಂದೆ ಪ್ರತಿದಿನ 1000-1200 ರೂ. ಸಂಪಾದಿಸು ತ್ತಿದೆ. ಆದರೀಗ 300 ರೂ.ಗೆ ಇಳಿದಿದೆ ಎನ್ನುತ್ತಾರೆ ದೊಡ್ಡಬಿದರಿಕಲ್ಲು ನಿವಾಸಿ ನಾಗೇಶ್.
ನಾನು ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಸಮಯ ಸಿಕ್ಕಾಗ ಬೈಕ್ ಟ್ಯಾಕ್ಸಿ ಚಲಿಸುತ್ತೇನೆ. ಕಾಲೇಜಿಗೆ ಹೋಗುತ್ತಾ, ಪ್ರತಿದಿನ 500 ರೂ. ಸಂಪಾದನೆ ಮಾಡುತ್ತಿದ್ದೆ. ಇದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿತ್ತು. ಕೋವಿಡ್-19 ಹಿನ್ನೆಲೆ ಟ್ಯಾಕ್ಸಿಗೆ ಬರುವವರ ಸಂಖ್ಯೆ ಕುಸಿದಿದೆ.
-ಕಾರ್ತಿಕ್, ಸ್ನಾತಕೋತ್ತರ ಪದವಿ ವಿದ್ಯಾರ್ಥಿ
ಮೊದಲು ದಿನಕ್ಕೆ 20-25 ಆರ್ಡರ್‌ಗಳನ್ನು ಡೆಲಿವೆರಿ ಮಾಡುತ್ತಿದ್ದೆವು. ಆದರೀಗ ದಿನಕ್ಕೆ 10-15ಕ್ಕೆ ಇಳಿದಿದೆ. ನಾವು ಡೆಲಿವರಿ ನೀಡುವಾಗ ಸ್ವತ್ಛತೆ ಕಾಪಾಡುತ್ತೇವೆ. ವೈರಸ್ ಭೀತಿಯಿಂದ ಆರ್ಡರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾ ದಂತೆ, ಉದ್ಯೋಗದ ಅಭದ್ರತೆ ಕಾಡುತ್ತಿದೆ.
-ಶಶಾಂಕ್, ಸ್ವಿಗ್ಗಿ ಡೆಲಿವರಿ ಬಾಯ್
* ಮಂಜುನಾಥ ಗಂಗಾವತಿ