ಚಾಮರಾಜನಗರ : ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಇರುವ ಪ್ರಯಾಣಿಕರನ್ನು ಮಾತ್ರ ರಾಜ್ಯದೊಳಕ್ಕೆ ಬಿಡಲಾಗುತ್ತಿದೆ.
ಕೇರಳದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಗಡಿಯಲ್ಲಿ ಪ್ರಯಾಣಿಕರ ತಪಾಸಣೆ, ಸ್ಕ್ರೀನಿಂಗ್ ಕಾರ್ಯ ನಡೆಸಲಾಗುತ್ತಿದೆ. ಕೇರಳದಿಂದ ಗುಂಡ್ಲುಪೇಟೆಯ ಗಡಿ ಪ್ರವೇಶಿಸುವ ವೇಳೆ ಹಿಂದಿನ 72 ಗಂಟೆಗಳ ಅವಧಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಇರುವವರನ್ನು ಮಾತ್ರ ಜಿಲ್ಲೆಯ ಗಡಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ಗಡಿಭಾಗದ ಮೂಲೆಹೊಳೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್ ತೆರೆದು ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ಕೇರಳ ಸಾರಿಗೆ ಹಾಗೂ ಕರ್ನಾಟಕ ಸಾರಿಗೆ ಬಸ್‌ಗಳ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ಕೇರಳದಿಂದ ಬರುವವರ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕೇಳಲಾಗುತ್ತಿದೆ. ಆರ್ ಟಿಪಿಸಿಆರ್ ವರದಿ ಇರದವರನ್ನು ರಾಜ್ಯದೊಳಕ್ಕೆ ಬಿಡಲಾಗುತ್ತಿಲ್ಲ. ಜ್ವರ ಇರುವವರನ್ನು ಕೇರಳದವರಾದರೆ ವಾಪಸ್ ಕಳುಹಿಸ ಲಾಗುತ್ತಿದೆ. ರಾಜ್ಯದವರಾದರೆ ಸಮೀಪದ ಕಗ್ಗಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ತಪಾಸಣೆ ಮಾಡಲಾಗುತ್ತದೆ.
ಸೋಮವಾರ ಸಂಜೆ, ರಾಜ್ಯದಿಂದ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದವರು, ವಾಹನಗಳಲ್ಲಿ ವಾಪಸ್ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ತಡೆದರು. ಆರ್‌ಟಿಪಿಸಿಆರ್ ಪರೀಕ್ಷಾ ವರದಿ ತೋರಿಸುವಂತೆ ತಿಳಿಸಿದರು. ನಾವು ಕರ್ನಾಟಕದಿಂದ ಕೂಲಿ ಕೆಲಸಕ್ಕೆ ಹೋಗಿದ್ದವರು. ಆರ್‌ಟಿಪಿಸಿಆರ್ ವರದಿ ತರಬೇಕೆಂಬ ನಿಯಮ ಗೊತ್ತಿರಲಿಲ್ಲ ಎಂದು ಕಾರ್ಮಿಕರು ಹೇಳಿದರು. ಜಿಲ್ಲಾಡಳಿತ ನಿರ್ದೇಶನ ಇರುವುದರಿಂದ ಆರ್‌ಟಿಪಿಸಿಆರ್ ವರದಿ ಇಲ್ಲದೆ ಬಿಡುವುದಿಲ್ಲವೆಂದು ಸಿಬ್ಬಂದಿ ತಿಳಿಸಿದರು. ನಂತರ ತಹಶೀಲ್ದಾರ್ ಅವರು ಸ್ಥಳಕ್ಕೆ ಬಂದು ಇದೊಂದು ಬಾರಿ ಅವಕಾಶ ನೀಡಲಾಗುತ್ತದೆ. ಮುಂದಿನ ಸಲ ಚೆಕ್ ಪೋಸ್ಟ್‌ನಲ್ಲಿ ಬಂದಾಗ ಆರ್‌ಟಿಪಿಸಿಆರ್ ವರದಿ ಕಡ್ಡಾಯ ಎಂದು ತಿಳಿಸಿದರು.