ನವದೆಹಲಿ: ಕೋವಿಡ್ 19 ಸೋಂಕಿನ ಕಾರಣದಿಂದ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ನಿಯಮಾವಳಿಗಳನ್ನು ಇನ್ನಷ್ಟು ಸಡಿಲಿಸಲಾಗಿದೆ.
ಅನ್ ಲಾಕ್ 3 ಯ ನಿಯಮಾವಳಿಗಳನ್ನು ಕೇಂದ್ರ ಗೃಹ ಇಲಾಖೆ ಇಂದು ಪ್ರಕಟಿಸಿದೆ.
ಈ ನಿಯಮಾವಳಿಗಳು ದೇಶದಲ್ಲಿನ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಸ್ಟ್ 01ರಿಂದ ಜಾರಿಗೆ ಬರಲಿದೆ.
ಇದರ ಪ್ರಕಾರ ಯೋಗ ತರಬೇತಿ ಕೇಂದ್ರಗಳನ್ನು ಹಾಗೂ ಜಿಮ್ ಗಳನ್ನು ಆಗಸ್ಟ್ ತಿಂಗಳಿನಿಂದ ತೆರೆಯಲು ಅನುಮತಿ ನೀಡಲಾಗಿದೆ. ಮತ್ತು ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ಆಗಸ್ಟ್ 01ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ.
Related Articles
ಯೋಗ ಕೇಂದ್ರಗಳು ಹಾಗೂ ಜಿಮ್ ಗಳನ್ನು ಆಗಸ್ಟ್ 5ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಮತ್ತು ಇವುಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಸದ್ಯದಲ್ಲೇ ಸ್ಟ್ಯಾಂಡರ್ಡ್ ಅಪರೇಷನ್ ಪ್ರೊಸೀಜರ್ ಪ್ರಕಟಿಸಲಿದೆ.
ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹಾಗೂ ಇನ್ನಿತರ ಆರೋಗ್ಯ ನಿಯಮಾಳಿಗಳನ್ನು ಪಾಲಿಸಿಕೊಂಡು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಆಚರಣೆಯನ್ನು ನಡೆಸಲು ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಲಾ ಕಾಲೇಜುಗಳನ್ನು ಆಗಸ್ಟ್ 31ರವರೆಗೆ ತೆರೆಯದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ.
ವಂದೇ ಭಾರತ್ ವಿಷನ್ ನಡಿಯಲ್ಲಿ ಕಾರ್ಯಾಚರಿಸುವ ವಿಮಾನಗಳಿಗೆ ಮಾತ್ರವೇ ಅಂತಾರಾಷ್ಟ್ರೀಯ ಸಂಚಾರಕ್ಕೆ ಸದ್ಯಕ್ಕೆ ಅನುಮತಿ ನೀಡಲಾಗಿದೆ.
ಜನರು ಮತ್ತು ಸರಕು ಸಾಗಾಟ ವಾಹನಗಳ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಇವುಗಳಿಗೆ ಪ್ರತ್ಯೇಕ ಅನುಮತಿಯ ಅಗತ್ಯವೂ ಇರುವುದಿಲ್ಲ.
ಇನ್ನು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿದಂತೆ ದೇಶದ ಉಳಿದೆಲ್ಲಾ ಕಡೆಗಳಲ್ಲಿ ಈ ಕೆಳಗಿನ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅನುಮತಿ ನೀಡಲಾಗಿದೆ.
– ಮೆಟ್ರೋ ರೈಲು ಸೇವೆಗಳಿಗೆ ಅನುಮತಿ ಇಲ್ಲ.
– ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಪೂಲ್ಸ್, ಮನರಂಜನಾ ಪಾರ್ಕ್ ಗಳು, ಥಿಯೇಟರ್ ಗಳು, ಬಾರ್ ಗಳು, ಆಡಿಟೋರಿಯಂಗಳು, ಸಭಾಂಗಣಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ.
– ಯಾವುದೇ ರೀತಿಯ ಸಾಮಾಜಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳು ಮತ್ತು ಬೃಹತ್ ಪ್ರಮಾಣದ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿಲ್ಲ.
ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಆಗಸ್ಟ್ 31ರವರೆಗೆ ಲಾಕ್ ಡೌನ್ ಪರಿಸ್ಥಿತಿ ಕಟ್ಟು ನಿಟ್ಟಾಗಿ ಮುಂದುವರಿಯಲಿದೆ. ಮತ್ತು ಈ ಪ್ರದೇಶಗಳಲ್ಲಿ ಅಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಗೃಹ ಇಲಾಖೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.
ಆಯಾಯ ಪ್ರದೇಶಗಳಲ್ಲಿರುವ ಕಂಟೈನ್ಮೆಂಟ್ ಪ್ರದೇಶಗಳ ಮಾಹಿತಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು ಮತ್ತು ಈ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೂ ಹಂಚಿಕೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತಾಗಿಸಿ ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಇನ್ನಿತರ ಕಡೆಗಳಲ್ಲಿ ಯಾವೆಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಬಹುದು ಮತ್ತು ನೀಡಬಾರದೆಂಬುದನ್ನು ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಕೇಂದ್ರ ಗೃಹ ಇಲಾಖೆ ನೀಡಿದೆ.
ಈ ಎಲ್ಲಾ ನಿರ್ಬಂಧ ತೆರವುಗಳು ಕೋವಿಡ್ 19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನ ನಿಯಮಗಳ ಅಡಿಯಲ್ಲೇ ನಡೆಯಬೇಕು ಮತ್ತು ಮಾಸ್ಕ್ ಧಾರಣೆ, ಸಾಮಾಜಿಕ ಅಂತರಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅನ್ ಲಾಕ್ 3.0 ನಿರ್ದೇಶನದಲ್ಲಿ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.