ಬೀಜಿಂಗ್/ಹೊಸದಿಲ್ಲಿ: ಚೀನ ದಲ್ಲಿ ಆರಂಭವಾದ ಕೊರೊನಾ ಆತಂಕ ಈಗ 60ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಜಾಗತಿಕವಾಗಿ 2,900 ಮಂದಿ ಈ ವೈರಸ್‌ಗೆ ಬಲಿಯಾಗಿದ್ದಾರೆ. ಜತೆಗೆ ಸುಮಾರು 87 ಸಾವಿರ ಮಂದಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ನಿಗಾದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ತಿಳಿಸಲಾಗಿದೆ. ಚೀನವೊಂದ ರಲ್ಲೇ 2,870 ಮಂದಿ ಮೃತಪಟ್ಟಿದ್ದು, ಇಲ್ಲಿ 79,824 ಸೋಂಕಿತರಿದ್ದಾರೆ.
ಪಾಕ್-ಆಫ್ಘಾನ್ ಗಡಿ ಬಂದ್: ಪಾಕಿಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4ಕ್ಕೇ ರಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರಕಾರ ಮುಂದಾಗಿದೆ. ಅದರಂತೆ, ಅಫ್ಘಾನಿಸ್ಥಾನದ ಜತೆ ಪಾಕ್ ಹೊಂದಿರುವ ಗಡಿಯನ್ನು ಸೋಮವಾರ ದಿಂದ 7 ದಿನ ಮುಚ್ಚಲು ನಿರ್ಧರಿಸಲಾಗಿದೆ. ಕರಾಚಿ ಸೇರಿದಂತೆ ಸಿಂಧ್ ಪ್ರಾಂತ್ಯದ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಇರಾನ್‌ಗೆ ಹೆಚ್ಚಿದ ಆತಂಕ: ಇರಾನ್‌ನಲ್ಲೂ ಕೋವಿಡ್-19 ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ರವಿವಾರ ಒಂದೇ ದಿನ 11 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ವೈರಸ್‌ಗೆ ಬಲಿಯಾದವರ ಸಂಖ್ಯೆ 54ಕ್ಕೇರಿದ್ದು, 978 ಮಂದಿಗೆ ಸೋಂಕು ತಗುಲಿದೆ. ಐರ್ಲೆಂಡ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ದ.ಕೊರಿ ಯಾದಲ್ಲಿ 376 ಪ್ರಕರಣ ಪತ್ತೆಯಾಗಿ ದ್ದು, ಸೋಂಕಿತರ ಸಂಖ್ಯೆ 3,526ಕ್ಕೇರಿದೆ.
ಮೊದಲ ಸಾವು: ಜಪಾನ್‌ನ ಡೈಮಂಡ್ ಪ್ರಿನ್ಸೆಸ್ ನೌಕೆಯಿಂದ ಸ್ವದೇಶಕ್ಕೆ ಮರಳಿದ್ದ 78 ವರ್ಷದ ವ್ಯಕ್ತಿ ಸಿಡ್ನಿಯ ಆಸ್ಪತ್ರೆಯಲ್ಲಿ ರವಿವಾರ ನಿಧನರಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಕೊರೊನಾಗೆ ಮೊದಲ ಬಲಿ ಆದಂತಾಗಿದೆ. ಅಮೆರಿಕದಲ್ಲೂ ವೈರಸ್‌ಗೆ ಮೊದಲ ಸಾವು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇರಾನ್, ಇಟಲಿ ಸೇರಿ ಕೆಲವು ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿ ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಕೋಳಿ ಮೇಳ: ಕೋಳಿಗಳಿಂದಲೂ ಕೊರೊನಾ ಹಬ್ಬುತ್ತದೆಂಬ ವದಂತಿ ಸುಳ್ಳಾಗಿಸುವ ನಿಟ್ಟಿನಲ್ಲಿ ಗುರುಗ್ರಾಮದಲ್ಲಿ ಕೋಳಿ ಸಾಕಣೆ ಸಂಘ, ‘ಕೋಳಿ ಮೇಳ’ ಆಯೋಜಿಸಿದೆ. ಇಲ್ಲಿ ಒಂದು ಪ್ಲೇಟ್ ಚಿಕನ್ ಖಾದ್ಯವನ್ನು 30 ರೂ.ಗೆ ಮಾರಾಟ ಮಾಡಲಾಗಿದ್ದು, ಚಿಕನ್, ಮಟನ್ ಅಥವಾ ಮೀನು ತಿನ್ನುವುದರಿಂದ ವೈರಸ್ ಹರಡುವುದಿಲ್ಲ ಎಂದು ತಿಳಿ ಹೇಳುವ ಕೆಲಸ ಮಾಡಲಾಗಿದೆ.
ನಾಸಿಕ್‌ನಲ್ಲಿ ವ್ಯಕ್ತಿ ಮೇಲೆ ನಿಗಾ
ಇಟಲಿಯಿಂದ ಆಗಮಿಸಿದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ವ್ಯಾಸಂಗಕ್ಕೆಂದು ಇಟಲಿಗೆ ಹೋಗಿದ್ದ ಈತ ಫೆ.26ರಂದು ಸ್ವದೇಶಕ್ಕೆ ಮರಳಿದ್ದ. ಆತನಿಗೆ ಕಫ, ನೆಗಡಿ ಹಾಗೂ ತೀವ್ರ ಬಳಲಿಕೆ ಕಂಡುಬಂದ ಕಾರಣ, ನಿಗಾದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.