ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯದರ್ಶನ ಇಲ್ಲಿರುತ್ತದೆ.
ವ್ಯಕ್ತಿಯೊಬ್ಬರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿ ವಿಚಿತ್ರ ಶಬ್ದದೊಂದಿಗೆ ಏದುಸಿರು ಬಿಡುತ್ತಿರುವ ವೀಡಿಯೋವೊಂದು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಇದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕೋವಿಡ್ 19 ವೈರಸ್ ಸೋಂಕಿತ ವ್ಯಕ್ತಿಯ ವಿಡಿಯೋ ಎಂಬ ಸುಳ್ಳು ಮಾಹಿತಿಯೊಂದಿಗೆ ಇದನ್ನು ಹರಿಬಿಡಲಾಗಿದೆ.
ಉತ್ತರ ಭಾರತದ ಭಾಗದಲ್ಲಿಇದೇ ವಿಡಿಯೋವನ್ನು ಬನಾರಸ್ ಆಸ್ಪತ್ರೆಯ ಕೊರೊನಾ ಪೀಡಿತ ವ್ಯಕ್ತಿ ಎಂದು ಹೇಳಿ ಹರಿಬಿಡಲಾಗಿದೆ. ಆದರೆ, ಈ ಎರಡೂ ಮಾಹಿತಿ ಸಂಪೂರ್ಣ ಸುಳ್ಳು. ಇದನ್ನು ನಂಬಿ ದಯವಿಟ್ಟು ಯಾರಿಗೂ ಫಾರ್ವರ್ಡ್ ಮಾಡದಿರಿ.
ಇದು ಈಕ್ವೆಡಾರ್‌ನ ಲಾಸ್ ರಿಯೋಸ್ ಎಂಬ ಪ್ರಾಂತ್ಯದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯ ವಿಡಿಯೋ. ಮಾ.18ರಂದು ಟ್ವಿಟರ್ ಖಾತೆದಾರರೊಬ್ಬರು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಜತೆಗೆ, ಸೂಕ್ತ ಸೌಲಭ್ಯಗಳಿಲ್ಲದ ಈಕ್ವೆಡಾರ್ ಆಸ್ಪತ್ರೆಗಳ ಸ್ಥಿತಿಯನ್ನು ಸುಧಾರಿಸಿ ಎಂದು ಅಲ್ಲಿನ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಆ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಈಗ ಯಾರೋ ಅದನ್ನು ಭಾರತದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಎಂಬರ್ಥದಲ್ಲಿ ಹಬ್ಬಿಸುತ್ತಿದ್ದಾರೆ. ಅದನ್ನು ನಂಬಿ ಎಷ್ಟೋ ಮಂದಿ ಭಯಭೀತರಾಗಿದ್ದಾರೆ ಮಾತ್ರವಲ್ಲ, ಅನೇಕರು ಈ ವಿಡಿಯೋಗಳನ್ನು ಮತ್ತಷ್ಟು ಗ್ರೂಪ್ ಗಳಿಗೆ ಶೇರ್ ಮಾಡುತ್ತಿದ್ದಾರೆ.