Advertisement

ಸಾವಿನ ಸಂಖ್ಯೆ: ಇಟಲಿ ಮೀರಿಸಿದ ಅಮೆರಿಕ ; ಮಹಾಮಾರಿಗೆ ಅಮೆರಿಕದಲ್ಲಿ 41 ಸಾವಿರ ಬಲಿ

03:37 AM Apr 21, 2020 | Hari Prasad |

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ 19 ವೈರಸ್ ನಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 41,316 ಮೀರಿದೆ ಎಂದು ಅಲ್ಲಿನ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ತಿಳಿಸಿದೆ. ಅವರಲ್ಲಿ ಬಹುಪಾಲು ಜನರು ನ್ಯೂಯಾರ್ಕ್‌ಗೆ ಸೇರಿದವರು.

Advertisement

ಅಮೆರಿಕದ ಈ ಸಾವಿನ ಸಂಖ್ಯೆ ಇಟಲಿಯನ್ನೂ ಮೀರಿಸಿದೆ. ಇಟಲಿಯಲ್ಲಿ ಈವರೆಗೆ 24,114 ಜನರು ಸಾವಿಗೀಡಾಗಿದ್ದು ಇದು ಜಗತ್ತಿನ 2ನೇ ಅತಿ ಹೆಚ್ಚು. ಸೋಂಕಿತರ ಸಂಖ್ಯೆ ಸ್ಪೇನ್‌ಗಿಂತ (2,00,210) ನಾಲ್ಕು ಪಟ್ಟು ಹೆಚ್ಚಾಗಿದ್ದು, ಅಮೆರಿಕದಲ್ಲಿ ಸದ್ಯಕ್ಕೀಗ 7,70,076 ಮಂದಿ ಸೋಂಕಿತರಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸಂಘರ್ಷ: ಟ್ರಂಪ್‌ ಅವರು, ಅಮೆರಿಕದ ಹಲವಾರು ಕಡೆ ಕೋವಿಡ್ ಹಾವಳಿ ತಗ್ಗಿದ್ದು ಆ ಪ್ರಾಂತ್ಯಗಳಲ್ಲಿ ಲಾಕ್‌ ಡೌನ್‌ ನಿಯಮಗಳನ್ನು ಸಡಿಲಿಸುವ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಅದನ್ನು ಅನೇಕ ಅಮೆರಿಕದ ಅನೇಕ ಗವರ್ನರ್ ಗಳು ವಿರೋಧಿಸಿದ್ದಾರೆ.

ತನಿಖಾಧಿಕಾರಿಗಳನ್ನು ಚೀನಾಕ್ಕೆ ಕಳಿಸುತ್ತೇವೆ
ಕೋವಿಡ್ ವೈರಸ್‌ ಚೀನದಲ್ಲಿ ಹೇಗೆ ಹುಟ್ಟಿತು, ಹೇಗೆ ಅದು ಜಗತ್ತಿಗೇ ಹರಡಿತು ಎಂಬುದನ್ನು ಪತ್ತೆ ಹಚ್ಚಲು ಚೀನಕ್ಕೆ ತಮ್ಮದೇ ಆದ ತನಿಖಾ ತಂಡವನ್ನು ಕಳಿಸುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. “ಚೀನಾಕ್ಕೆ ತನಿಖಾಧಿಕಾರಿಗಳನ್ನು ಕಳಿಸುವುದಾಗಿ ಈಗಾಗಲೇ ಚೀನದ ನಾಯಕರಿಗೆ ತಿಳಿಸಿದ್ದೇವೆ. ಅದರಂತೆ ತನಿಖಾ ತಂಡವನ್ನು ಕಳಿಸುತ್ತೇವೆ” ಎಂದಿದ್ದಾರೆ.

ಎನ್‌ಆರ್‌ಐ ವೈದ್ಯರ ಶ್ಲಾಘನೀಯ ಸೇವೆ
ಅಮೆರಿಕದಲ್ಲಿ ಕೋವಿಡ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ಭಾರತ ಮೂಲದ ಅಮೆರಿಕ ವೈದ್ಯರಲ್ಲಿ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನೂ ಅನೇಕರು ಸೋಂಕನ್ನು ಹತ್ತಿಸಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

Advertisement

ಡಾ. ರಜತ್‌ ಶರ್ಮಾ (ಹೆಸರು ಬದಲಿಸಲಾಗಿದೆ) ಅವರು ಕೋವಿಡ್ ರೋಗಿಯೊಬ್ಬನ ಚಿಕಿತ್ಸೆಯಲ್ಲಿ ತೊಡಗಿದ್ದಾಗ ಆ ರೋಗಿ ಅವರ ಮುಖಕ್ಕೆ ವಸ್ತುವನ್ನು ಬೀಸಿ ಎಸೆದ. ಗಾಯಗೊಂಡಿದ್ದ ವೈದ್ಯರನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲೂ ಸೋಂಕು ಇರುವುದು ದೃಢಪಟ್ಟಿತು. ಗಾಯದ ಜೊತೆಗೆ ಕೋವಿಡ್ ನಿಂದಲೂ ಬಳಲಿದ ಆ ವೈದ್ಯರು ಕೆಲ ದಿನಗಳ ನಂತರ ಸಾವನ್ನಪ್ಪಿದರು. ಕೆದಕಿದರೆ ಕರುಳು ಕಿವುಚುವಂಥ ಇಂಥ ಅನೇಕ ಕಥೆಗಳು ಬಹಿರಂಗವಾಗುತ್ತಿವೆ.

ನಾವು ಅಪರಾಧಿಗಳಲ್ಲ, ಬಲಿಪಶುಗಳು: ಚೀನ
ಅಮೆರಿಕದ ತಜ್ಞರ ತಂಡ ವುಹಾನ್‌ಗೆ ಭೇಟಿ ನೀಡಿ ಕೋವಿಡ್ ವೈರಸ್‌ ಮೂಲದ ಕುರಿತು ತನಿಖೆ ನಡೆಸಲು ಅವಕಾಶ ನೀಡಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೇಡಿಕೆಯನ್ನು ಚೀನ ಸಾರಾಸಗಟಾಗಿ ತಿರಸ್ಕರಿಸಿದೆ. ಅಲ್ಲದೆ, ಈ ವೈರಸ್‌ ಸೋಂಕಿನ ವಿಷಯದಲ್ಲಿ ಚೀನ ಬಲಿಪಶುವೇ ಹೊರತು ಅಪರಾಧಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನದ ವಿದೇಶಾಂಗ ಸಚಿವಾಲಯ, ಕೋವಿಡ್ ವೈರಸ್‌ ಇಡೀ ಮಾನವ ಸಂಕುಲದ ಸಾಮಾನ್ಯ ವೈರಿ. ಅದು ಯಾವ ಸಂದರ್ಭದಲ್ಲಿ ಯಾವ ದೇಶದ ಮೇಲಾದರೂ ಆಕ್ರಮಣ ಮಾಡಬಹುದು ಬೇರೆ ದೇಶಗಳಂತೆ ಚೀನ ಕೂಡ ಈ ಸೋಂಕಿಗೆ ಬಲಿಪಶು ಆಗಿದೆಯೇ ಹೊರತು ಅಪರಾಧಿಯಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next