ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದ್ದು ಯಾವುದೇ ಸಂದರ್ಭ ಎದುರಿಸಲು ಸಿದ್ಧರಿದ್ದೇವೆ. ಜನತೆ ಆತಂಕಪಡಬೇಕಿಲ್ಲ ಎಂದು ಕೋವಿಡ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮಲ್ಲಿ ಅನುಭವಿ ಹಾಗೂ ದೂರದೃಷ್ಟಿವುಳ್ಳ ಅಧಿಕಾರಿಗಳು ಇದ್ದಾರೆ.
ಹೀಗಾಗಿಯೇ ಕೋವಿಡ್ 19 ನಿಯಂತ್ರಿಸಲು ಸಾಧ್ಯವಾಗಿದೆ. ಎಲ್ಲ ಹಂತಗಳಲ್ಲಿಯೂ ಸುಸೂತ್ರವಾಗಿ ಕೆಲಸ ನಡೆಯುತ್ತಿದೆ. ಯಾರೂ ಆತಂಕ ಪಟ್ಟು ಬೆಂಗಳೂರು ಬಿಟ್ಟು ಹೋಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ನೆರೆ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಮುಂಬೈ ಮತ್ತಿತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ, ಯಾರೂ ಭಯ ಬೀಳಬೇಕಿಲ್ಲ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ 19 ಅಕ್ಟೋಬರ್‌ಗೆ ಪರಾಕಾಷ್ಠೆಗೆ ಮುಟ್ಟಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರ ನೀಡಿದೆ. ಅದಕ್ಕೆ ತಕ್ಕ ಹಾಗೆ ಸರ್ಕಾರವು ಕೋವಿಡ್ 19 ಚಿಕಿತ್ಸೆಗೆ ಹಾಸಿಗೆಗಳ ವ್ಯವಸ್ಥೆ, ಕೋವಿಡ್ ಕೇರ್ ಸೆಂಟರ್‌ಗಳನ್ನೂ ಅಗತ್ಯಕ್ಕೆ ತಕ್ಕಂತೆ ಸ್ಥಾಪನೆ ಮಾಡಿದ್ದೇವೆ. ಬೆಂಗಳೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇಂದ್ರ ತೆರೆದಿದ್ದು ಇದು ಜಗತ್ತಿನಲ್ಲೇ ದೊಡ್ಡದು ಎಂದರು. ಪ್ರತಿನಿತ್ಯ 20 ಸಾವಿರ ಪರೀಕ್ಷೆಗಳು ನಡೆಯುತ್ತಿದ್ದು 100 ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕೋವಿಡ್ 19 ಸಮುದಾಯಕ್ಕೆ ಹರಡುವ ಹಂತಕ್ಕೆ ಬಂದಿಲ್ಲ. ವ್ಯಾಪಕವಾಗಿ ಹಬ್ಬುತ್ತಿದೆ ಆದರೆ ಸಮುದಾಯದ ಮಟ್ಟಕ್ಕೆ ಬಂದಿಲ್ಲ. ಪ್ರಸ್ತುತ ಎರಡನೇ ಹಂತದಲ್ಲಿದ್ದು ಅದೇ ಹಂತದಲ್ಲಿ ಮುಂದುವರಿದಿದೆ. ಈ ಹಂತದ ದಾಟದ ಹಾಗೆ ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು.
-ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ