ಗದಗ: ಜಿಲ್ಲೆಯ ಮೊದಲ ಕೋವಿಡ್-19 ಸೋಂಕು ಮಂಗಳವಾರ ದೃಢ ಪಟ್ಟಿದೆ. ನಗರದ ದತ್ತಾತ್ರೇಯ ರಸ್ತೆಯ ರಂಗನವಾಡ ಓಣಿಯ ನಿವಾಸಿ 80 ವರ್ಷದ ವೃದ್ಧೆಗೆ ಕೊರೋನಾ ಸೋಂಕು ತಗುಲಿದೆ. ಅವರೊಂದಿಗೆ ಸಂಪರ್ಕದಲ್ಲಿ ಒಟ್ಟು 44 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ರಂಗನವಾಡ ಓಣಿ ನಿವಾಸಿಯಾಗಿರುವ 80 ವರ್ಷದ ವೃದ್ಧೆ ತನ್ನ ತಂಗಿಯ ಮನೆಯಲ್ಲಿ ವಾಸವಿದ್ದಾಳೆ. ವೃದ್ಧೆ, ಆಕೆಯ ತಂಗಿ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಒಟ್ಟಾಗಿ ವಾಸವಿದ್ದರು.
ಇತ್ತೀಚೆಗೆ ಎಸ್.ಎಂ.ಕೃಷ್ಣಾ ನಗರದಲ್ಲಿ ನಡೆದಿದ್ದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಆಕೆ ಭಾಗವಹಿಸಿದ್ದರು. ಇದೇ ಕಾರ್ಯಕ್ರಕ್ಕೆ ಗೋವಾದಿಂದ ಏಳು ಜನರು ಆಗಮಿಸಿದ್ದು, ಅವರಿಂದ ಸೋಂಕು ಹರಡಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ವೃದ್ಧೆಯೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 44 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶಾದ್ಯಂತ ಕೋವಿಡ್-19 ಭೀತಿ ಆವರಿಸಿದ್ದರೂ, ಜಿಲ್ಲೆಯಲ್ಲಿ ಈವರೆಗೂ ವೈರಸ್ ಪತ್ತೆಯಾಗಿರಲಿಲ್ಲ. ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಉಪಕ್ರಮಗಳನ್ನಯ ಕೈಗೊಂಡಿತ್ತು. ಆದರೂ, ಇದೀಗ ಜಿಲ್ಲೆಯಲ್ಲಿ ಒಂದು ಪ್ರಕರಣ ದೃಢ ಪಟ್ಟಿರುವುದು ವಿಷಾದನೀಯ ಎಂದರು.