ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಕೋವಿಡ್-19 ಸೋಂಕಿತರ ಸಂಖ್ಯೆ ಇನ್ನೂರರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 216 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಇಂದು ಮಧ್ಯಾಹ್ನದ ವರದಿಯಲ್ಲಿ 196 ಹೊಸ ಪ್ರಕರಣಗಳು ದೃಢವಾಗಿತ್ತು. ನಂತರ ಮತ್ತೆ 20 ಪ್ರಕರಣಗಳು ವರದಿಯಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.
ಈ 20 ಪ್ರಕರಣಗಳಲ್ಲಿ 16 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ತಾಗಿದೆ. ಉಡುಪಿಯಲ್ಲಿ ಕಂಡು ಬಂದ ಎರಡು ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಆರು ಪ್ರಕರಣ, ಧಾರವಾಡದಲ್ಲಿ ನಾಲ್ಕು ಪ್ರಕರಣಗಳು, ಬೀದರ್, ಬಳ್ಳಾರಿಯಲ್ಲಿ ತಲಾ ಮೂರು ಪ್ರಕರಣಗಳು ಪತ್ತೆಯಾಗಿದ್ದರೆ, ಉಡುಪಿಯಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ರಾಯಚೂರು ಮತ್ತು ಕೋಲಾರದಲ್ಲಿ ತಲಾ ಒಂದು ಕೋವಿಡ್-19 ಸೋಂಕು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ. ಒಟ್ಟು 608 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 42 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.